July 4, 2026
Saturday, July 4, 2026
spot_img

ಮಳೆಗಾಗಿ ಕತ್ತೆಗಳ ಮದುವೆ: ಜಾಲತಾಣಗಳಲ್ಲಿ ವೈರಲ್ ಆಯ್ತು ‘ಕಾಂತೇಶ weds ಕಸ್ತೂರಿ’ ಆಮಂತ್ರಣ ಪತ್ರಿಕೆ!

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ: ಉತ್ತರ ಕರ್ನಾಟಕದ ಭಾಗದಲ್ಲಿ ಜೂನ್ ತಿಂಗಳು ಮುಗಿದು ಜುಲೈ ಆರಂಭವಾಗುತ್ತಿದ್ದರೂ ಈ ಬಾರಿ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದೆ ಮುನಿಸಿಕೊಂಡಿದ್ದಾನೆ. ಬಿತ್ತನೆ ಕಾರ್ಯ ಚುರುಕುಗೊಳ್ಳಬೇಕಾದ ಈ ಸಮಯದಲ್ಲಿ ಮಳೆರಾಯ ಕೈಕೊಟ್ಟಿರುವುದು ಅನ್ನದಾತರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಳೆರಾಯನನ್ನು ಪ್ರಸನ್ನಗೊಳಿಸಲು ಹಾಗೂ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಲಿ ಎಂದು ಪ್ರಾರ್ಥಿಸಿ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದ ಜನತೆ ವಿಶಿಷ್ಟ ಸಂಪ್ರದಾಯಕ್ಕೆ ಮುಂದಾಗಿದ್ದು, ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮಳೆಯಾಗದಿದ್ದಾಗ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಅಥವಾ ಮಣ್ಣಿನ ಗೊಂಬೆಗಳನ್ನು ಮಾಡಿ ಮೆರವಣಿಗೆ ಮಾಡುವಂತಹ ವಿಶಿಷ್ಟ ಆಚರಣೆಗಳು ಮತ್ತು ನಂಬಿಕೆಗಳು ಶತಮಾನಗಳಿಂದಲೂ ನಡೆದುಕೊಂಡು ಬಂದಿವೆ. ಕತ್ತೆಗಳ ಮದುವೆ ಮಾಡಿದರೆ ಮಳೆರಾಯ ಕೃಪೆ ತೋರುತ್ತಾನೆ ಎಂಬ ಬಲವಾದ ನಂಬಿಕೆ ಈ ಭಾಗದ ಜನರದ್ದಾಗಿದೆ. ಅದರಂತೆ ಇದೀಗ ಮುನ್ಯಾಳ ಗ್ರಾಮಸ್ಥರು ಮಳೆಗಾಗಿ ಈ ವಿನೂತನ ಮದುವೆಗೆ ಸಜ್ಜಾಗಿದ್ದಾರೆ.

ಕಾಂತೇಶ-ಕಸ್ತೂರಿ ವಿವಾಹ ಮಹೋತ್ಸವ: ಈ ವಿಶೇಷ ಕಲ್ಯಾಣ ಮಹೋತ್ಸವಕ್ಕಾಗಿ ಗ್ರಾಮಸ್ಥರು ಈಗಾಗಲೇ ವರ ಮತ್ತು ವಧು ಕತ್ತೆಗಳನ್ನು ಗುರುತಿಸಿದ್ದು, ಅವುಗಳಿಗೆ ಶಾಸ್ತ್ರೋಕ್ತವಾಗಿ ನಾಮಕರಣವನ್ನೂ ಮಾಡಿದ್ದಾರೆ. ಗಂಡು ಕತ್ತೆಗೆ ‘ಕಾಂತೇಶ’ ಎಂದೂ, ಹೆಣ್ಣು ಕತ್ತೆಗೆ ‘ಕಸ್ತೂರಿ’ ಎಂದೂ ಹೆಸರಿಡಲಾಗಿದೆ. ಇನ್ನು ಈ ವಿಶಿಷ್ಟ ಮದುವೆಯನ್ನು ಅಚ್ಚುಕಟ್ಟಾಗಿ ನೆರವೇರಿಸಲು ಇಡೀ ಗ್ರಾಮವೇ ಒಂದಾಗಿದೆ. ಗ್ರಾಮದಲ್ಲಿ ಎರಡು ಪ್ರತ್ಯೇಕ ಪಂಗಡಗಳನ್ನು ರಚಿಸಿಕೊಳ್ಳಲಾಗಿದ್ದು, ಒಂದು ಪಂಗಡವು ವರ ಕಾಂತೇಶನ ಕಡೆಯವರಾಗಿ ಬೀಗತನದ ಜವಾಬ್ದಾರಿ ಹೊತ್ತಿದ್ದರೆ, ಮತ್ತೊಂದು ಪಂಗಡವು ವಧು ಕಸ್ತೂರಿಯ ಕಡೆಯವರಾಗಿ ಮದುವೆಯ ಸಕಲ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ:

ನೆಟ್ಟಿಗರ ಗಮನ ಸೆಳೆದ ಲಗ್ನ ಪತ್ರಿಕೆ: ವಿಶೇಷವೆಂದರೆ, ಈ ಕತ್ತೆಗಳ ಮದುವೆಗಾಗಿ ಗ್ರಾಮಸ್ಥರು ಕೇವಲ ಬಾಯಿಮಾತಿನ ಆಹ್ವಾನ ನೀಡುತ್ತಿಲ್ಲ. ಬದಲಿಗೆ ಶಾಸ್ತ್ರೋಕ್ತವಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿದ್ದಾರೆ. ಸದ್ಯ ಈ ‘ಕಾಂತೇಶ ಮತ್ತು ಕಸ್ತೂರಿ’ ಜೋಡಿಯ ವಿವಾಹದ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ಬುಕ್ಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಪತ್ರಿಕೆ ನೋಡಿದ ಸಾರ್ವಜನಿಕರು ಗ್ರಾಮೀಣ ಭಾಗದ ಈ ನಂಬಿಕೆ ಮತ್ತು ಸಿದ್ಧತೆಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಸಂಪ್ರದಾಯದ ಪ್ರಕಾರ ಸಕಲ ವಾದ್ಯಮೇಳಗಳೊಂದಿಗೆ, ಮಂತ್ರಘೋಷಗಳ ನಡುವೆ ಈ ಕತ್ತೆಗಳ ವಿವಾಹ ಮಹೋತ್ಸವ ನೆರವೇರಲಿದ್ದು, ಮದುವೆಯ ನಂತರ ಗ್ರಾಮದಲ್ಲಿ ಅನ್ನಸಂತರ್ಪಣೆಯನ್ನೂ ಹಮ್ಮಿಕೊಳ್ಳಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಪ್ರಕೃತಿಯ ಮುನಿಸು ಶಮನವಾಗಿ, ವರುಣ ದೇವನು ಕೃಪೆ ತೋರಿ ಸಕಾಲದಲ್ಲಿ ಮಳೆ ಸುರಿಸಲಿ ಎಂಬ ಏಕೈಕ ಆಶಯದೊಂದಿಗೆ ಮುನ್ಯಾಳ ಗ್ರಾಮಸ್ಥರು ಹಮ್ಮಿಕೊಂಡಿರುವ ಈ ಅಪರೂಪದ ಮದುವೆ ಸದ್ಯ ಇಡೀ ತಾಲೂಕಿನಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !