July 5, 2026
Sunday, July 5, 2026
spot_img

ಬೆಥೆಲ್ ಅಬ್ಬರಕ್ಕೆ ಮಂಕಾದ ಟೀಮ್ ಇಂಡಿಯಾ: 2ನೇ ಟಿ20ಯಲ್ಲಿ ಇಂಗ್ಲೆಂಡ್‌ಗೆ ಭರ್ಜರಿ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ (43) ಮತ್ತು ವೈಭವ್ ಸೂರ್ಯವಂಶಿ (14) ಪವರ್‌ಪ್ಲೇನಲ್ಲಿ 65 ರನ್ ಗಳಿಸಿ ಉತ್ತಮ ಆರಂಭ ನೀಡಿದರು.

ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ

ನಾಯಕ ಶ್ರೇಯಸ್ ಅಯ್ಯರ್ 37 ರನ್ ಗಳಿಸಿದರೆ, ಇಶಾನ್ ಕಿಶನ್ (49 ರನ್, 40 ಎಸೆತ) ಆಮೆಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಇದರಿಂದಾಗಿ ಭಾರತದ ರನ್ ವೇಗ ಕುಂಠಿತವಾಯಿತು. ಕೊನೆಯ ಓವರ್‌ನಲ್ಲಿ ತಿಲಕ್ ವರ್ಮಾ ಸಿಡಿಸಿದ ಸಿಕ್ಸರ್‌ಗಳ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿತು.

ಇಂಗ್ಲೆಂಡ್ ಆರಂಭಿಕ ಆಘಾತ

191 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಹರ್ಷದೀಪ್ ಸಿಂಗ್ ಮೊದಲ ಓವರ್‌ನಲ್ಲೇ ಸಾಲ್ಟ್ (0) ಹಾಗೂ ಬಟ್ಲರ್ (0) ವಿಕೆಟ್ ಪಡೆದು ಶಾಕ್ ನೀಡಿದರು. ಆದರೆ, ನಾಯಕ ಹ್ಯಾರಿ ಬ್ರೂಕ್ (39) ಮತ್ತು ಟಾಮ್ ಬ್ಯಾಂಟನ್ (39) ತಂಡಕ್ಕೆ ಆಸರೆಯಾದರು.

ಜೇಕಬ್ ಬೆಥೆಲ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್

ಕೊನೆಯ 5 ಓವರ್‌ಗಳಲ್ಲಿ ಇಂಗ್ಲೆಂಡ್‌ಗೆ 59 ರನ್‌ಗಳ ಅಗತ್ಯವಿತ್ತು. ರವಿ ಬಿಷ್ಣೋಯ್ ಎಸೆದ 17ನೇ ಓವರ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಬರೋಬ್ಬರಿ 29 ರನ್ ಚಚ್ಚಿ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೇಕಬ್ ಬೆಥೆಲ್ 46 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಫೋರ್‌ಗಳೊಂದಿಗೆ ಅಜೇಯ 76 ರನ್ ಸಿಡಿಸಿದರು. ಇದರ ನೆರವಿನಿಂದ ಇಂಗ್ಲೆಂಡ್ 19 ಓವರ್‌ಗಳಲ್ಲೇ 4 ವಿಕೆಟ್‌ಗಳ ಜಯ ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !