ಪಕ್ಷಾಘಾತ ಅಥವಾ ಸ್ಟ್ರೋಕ್ ಸಂಭವಿಸಿದ ತಕ್ಷಣದ ಮೊದಲ ಕೆಲವು ವಾರಗಳನ್ನು ವೈದ್ಯಕೀಯ ಜಗತ್ತಿನಲ್ಲಿ ‘ಗೋಲ್ಡನ್ ಪೀರಿಯಡ್’ ಎಂದು ಕರೆಯಲಾಗುತ್ತದೆ. ಈ ನಿರ್ಣಾಯಕ ಅವಧಿಯಲ್ಲಿಯೇ ಮೆದುಳು ತನ್ನನ್ನು ತಾನು ಮರುಸಂಪರ್ಕಿಸಿಕೊಳ್ಳುವ ಮತ್ತು ಕಳೆದುಹೋದ ಶಕ್ತಿಯನ್ನು ಮರಳಿ ಪಡೆಯುವ ಸಾಮರ್ಥ್ಯವನ್ನು ಹೆಚ್ಚಾಗಿ ಹೊಂದಿರುತ್ತದೆ. ಇದೇ ಕಾರಣಕ್ಕೆ, ಸ್ಟ್ರೋಕ್ ಆದ ತಕ್ಷಣವೇ ಫಿಸಿಯೋಥೆರಪಿ ಚಿಕಿತ್ಸೆಯನ್ನು ಆರಂಭಿಸುವುದು ಅತ್ಯಂತ ಕಡ್ಡಾಯವಾಗಿದೆ.
ವೈದ್ಯರ ಪ್ರಕಾರ, ಆರಂಭಿಕ ಹಂತದ ಫಿಸಿಯೋಥೆರಪಿಯು ರೋಗಿಯು ಹಾಸಿಗೆ ಹಿಡಿಯುವುದನ್ನು ತಪ್ಪಿಸಿ, ಅವರು ಬೇಗನೆ ಎದ್ದು ನಡೆದಾಡುವಂತೆ ಮಾಡಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳಲಾಗುತ್ತದೆ.
ಸ್ಟ್ರೋಕ್ ಎಂದರೇನು?
ಮೆದುಳಿಗೆ ರಕ್ತ ಪೂರೈಕೆ ಆಗುವ ನರಗಳಲ್ಲಿ ತಡೆ ಉಂಟಾಗುವುದು ಅಥವಾ ಮೆದುಳಿನಲ್ಲಿ ರಕ್ತಸ್ರಾವವಾಗುವುದು ಸ್ಟ್ರೋಕ್ (ಪಕ್ಷಾಘಾತ) ಎಂದು ಕರೆಯಲಾಗುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ವ್ಯಕ್ತಿಯ ದೈನಂದಿನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಸ್ಟ್ರೋಕ್‌ನಿಂದ ಕೈ-ಕಾಲುಗಳಲ್ಲಿ ದುರ್ಬಲತೆ, ಮಾತನಾಡಲು ತೊಂದರೆ, ದೇಹದ ಸಮತೋಲನ ಕಳೆದುಕೊಳ್ಳುವುದು ಹಾಗೂ ನಡೆಯಲು ಕಷ್ಟವಾಗುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು.
ಇಂತಹ ಸಂದರ್ಭದಲ್ಲಿ ಔಷಧೋಪಚಾರದ ಜತೆಗೆ ಫಿಸಿಯೋಥೆರಪಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಇದು ರೋಗಿಯು ತನ್ನ ದೈನಂದಿನ ಚಟುವಟಿಕೆಗಳನ್ನು ಸಾಧ್ಯವಾದಷ್ಟು ಸ್ವತಂತ್ರವಾಗಿ ನಿರ್ವಹಿಸಿ, ಸಾಮಾನ್ಯ ಜೀವನಕ್ಕೆ ಮರಳಲು ಸಹಕಾರಿಯಾಗುತ್ತದೆ.
ಫಿಸಿಯೋಥೆರಪಿಯ ಪ್ರಯೋಜನಗಳು
ಸ್ಟ್ರೋಕ್‌ನಿಂದ ಕಳೆದುಹೋದ ದೈಹಿಕ ಸಾಮರ್ಥ್ಯವನ್ನು ಪುನಃ ಪಡೆಯಲು ಫಿಸಿಯೋಥೆರಪಿ ನೆರವಾಗುತ್ತದೆ. ಇದು ಸ್ನಾಯುಗಳ ಬಲವನ್ನು ಹೆಚ್ಚಿಸಿ, ಚಲನವಲನವನ್ನು ಸುಧಾರಿಸಿ ಹಾಗೂ ಮೆದುಳಿನ ನ್ಯೂರೋಪ್ಲಾಸ್ಟಿಸಿಟಿ (Neuroplasticity) ಎಂಬ ಸ್ವಾಭಾವಿಕ ಸಾಮರ್ಥ್ಯವನ್ನು ಉತ್ತೇಜಿಸುತ್ತದೆ.
ರೋಗಿಯ ಸ್ಥಿತಿ ಸ್ಥಿರವಾದ ನಂತರ 24–48 ಗಂಟೆಗಳೊಳಗೆ ಫಿಸಿಯೋಥೆರಪಿ ಆರಂಭಿಸಿದರೆ ದೀರ್ಘಕಾಲದ ತೊಂದರೆಗಳನ್ನು ತಡೆಯಲು ಹಾಗೂ ಚೇತರಿಕೆಯನ್ನು ವೇಗಗೊಳಿಸಲು ಸಹಕಾರಿ.
ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ:
- ಕೀಲುಗಳ ಬಿಗಿತ (Joint Stiffness)
- ಸ್ನಾಯುಗಳ ಶಾಶ್ವತ ಕುಗ್ಗುವಿಕೆ (Contracture)
- ಆಳವಾದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Deep Vein Thrombosis – DVT)
ಇಂತಹ ತೊಂದರೆಗಳನ್ನು ತಡೆಯಬಹುದು.
ಫಿಸಿಯೋಥೆರಪಿಯ ಮೂಲಕ ರೋಗಿಗೆ ಹಾಸಿಗೆಯಿಂದ ಎದ್ದೇಳುವುದು, ಕುಳಿತುಕೊಳ್ಳುವುದು, ನಿಲ್ಲುವುದು, ಸಮತೋಲನ ಕಾಪಾಡಿಕೊಳ್ಳುವುದು ಹಾಗೂ ಸುರಕ್ಷಿತವಾಗಿ ನಡೆಯುವುದನ್ನು ಕಲಿಸಲಾಗುತ್ತದೆ.
ಇದಲ್ಲದೆ, ಮೆದುಳಿನ ಆರೋಗ್ಯಕರ ಭಾಗಗಳು ಹೊಸ ನರಸಂಪರ್ಕಗಳನ್ನು ನಿರ್ಮಿಸಿ, ಹಾನಿಗೊಳಗಾದ ಭಾಗಗಳ ಕೆಲವು ಕಾರ್ಯಗಳನ್ನು ಪುನಃ ಕಲಿಯುವ ನ್ಯೂರೋಪ್ಲಾಸ್ಟಿಸಿಟಿ ಪ್ರಕ್ರಿಯೆಗೆ ಉತ್ತೇಜನ ಸಿಗುತ್ತದೆ. ಇದರ ಪರಿಣಾಮವಾಗಿ ರೋಗಿಯು ಕ್ರಮೇಣ ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು, ಹೆಚ್ಚು ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ.
ಫಿಸಿಯೋಥೆರಪಿಯ ಚಿಕಿತ್ಸಾ ವಿಧಾನಗಳು
ಸ್ಟ್ರೋಕ್ ಪುನರ್ವಸತಿಯಲ್ಲಿ ಮೊದಲು ಎಲೆಕ್ಟ್ರೋಥೆರಪಿ, ನಂತರ ಚಿಕಿತ್ಸಾತ್ಮಕ ವ್ಯಾಯಾಮಗಳನ್ನು ನೀಡಲಾಗುತ್ತದೆ.
ಎಲೆಕ್ಟ್ರೋಥೆರಪಿ ಮೂಲಕ ದುರ್ಬಲಗೊಂಡ ಸ್ನಾಯುಗಳಿಗೆ ಸಣ್ಣ ಪ್ರಮಾಣದ ವಿದ್ಯುತ್ ಪ್ರಚೋದನೆ ನೀಡಲಾಗುತ್ತದೆ. ಇದು ಸುರಕ್ಷಿತ ಚಿಕಿತ್ಸೆಯಾಗಿದ್ದು, ಹಾನಿಗೊಳಗಾದ ನರ-ಸ್ನಾಯುಗಳ ಕಾರ್ಯವನ್ನು ಉತ್ತೇಜಿಸಿ, ಸ್ನಾಯುಗಳ ಕ್ಷೀಣತೆಯನ್ನು ತಡೆದು, ರೋಗಿಯ ಚಲನವಲನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಚಲನಾ ವ್ಯಾಪ್ತಿ (Range of Motion) ವ್ಯಾಯಾಮಗಳು ಕೀಲುಗಳ ಚಲನೆಯನ್ನು ಕಾಪಾಡಿ, ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡುತ್ತವೆ.
ಸ್ನಾಯು ಬಲವರ್ಧಕ ವ್ಯಾಯಾಮಗಳು (Strength Training) ದುರ್ಬಲಗೊಂಡ ಸ್ನಾಯುಗಳ ಬಲವನ್ನು ಹೆಚ್ಚಿಸುತ್ತವೆ.
ನಡಿಗೆ ತರಬೇತಿ (Gait Training) ಮೂಲಕ ಸಮತೋಲನ ಕಾಪಾಡಿಕೊಂಡು ಸುರಕ್ಷಿತವಾಗಿ ನಡೆಯುವುದನ್ನು ಕಲಿಸಲಾಗುತ್ತದೆ.
ಇದಲ್ಲದೆ, ಊಟ ಮಾಡುವುದು, ಬಟ್ಟೆ ಧರಿಸುವುದು, ಹಾಸಿಗೆಯಿಂದ ಕುರ್ಚಿಗೆ ಸ್ಥಳಾಂತರಗೊಳ್ಳುವುದು ಹಾಗೂ ಇತರ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ವಿಶೇಷ ತರಬೇತಿ ನೀಡಲಾಗುತ್ತದೆ.
ಆರೈಕೆದಾರರು ಗಮನಿಸಬೇಕಾದ ವಿಷಯಗಳು
ಫಿಸಿಯೋಥೆರಪಿಯಿಂದ ಉತ್ತಮ ಫಲಿತಾಂಶ ಪಡೆಯಲು ಆಸ್ಪತ್ರೆ ಅಥವಾ ಪುನರ್ವಸತಿ ಕೇಂದ್ರದಲ್ಲಿ ನೀಡುವ ಚಿಕಿತ್ಸೆಯ ಜೊತೆಗೆ ಮನೆಯಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಅತ್ಯಗತ್ಯ.
ತಜ್ಞರು ಸೂಚಿಸಿದ ವ್ಯಾಯಾಮಗಳನ್ನು ಪ್ರತಿದಿನ ಸರಿಯಾಗಿ ಮಾಡಿಸಲು ಮನೆಯ ಸದಸ್ಯರು ಸಹಕರಿಸಬೇಕು.
ರೋಗಿಯು ನಡೆಯುವಾಗ ಅಥವಾ ಚಲಿಸುವಾಗ ಬೀಳದಂತೆ ಸುರಕ್ಷಿತ ವಾತಾವರಣವನ್ನು ಒದಗಿಸಬೇಕು. ನಿರಂತರವಾಗಿ ಪ್ರೋತ್ಸಾಹಿಸುವುದು, ಅವರ ಪ್ರತಿಯೊಂದು ಸಣ್ಣ ಪ್ರಗತಿಯನ್ನು ಗುರುತಿಸಿ ಮೆಚ್ಚುವುದು ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಚೇತರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಕೊನೆಯ ಮಾತು
ಸ್ಟ್ರೋಕ್‌ನಿಂದ ಚೇತರಿಸಿಕೊಳ್ಳುವುದು ಸಮಯ ಮತ್ತು ತಾಳ್ಮೆ ಅಗತ್ಯವಿರುವ ದೀರ್ಘ ಪ್ರಯಾಣವಾಗಿದೆ. ವೈಜ್ಞಾನಿಕವಾಗಿ ರೂಪಿಸಲಾದ ನಿರಂತರ ಫಿಸಿಯೋಥೆರಪಿ, ವೈದ್ಯರ ಸಲಹೆಯಂತೆ ನಡೆಯುವ ಪುನರ್ವಸತಿ ಕಾರ್ಯಕ್ರಮ ಹಾಗೂ ಕುಟುಂಬದ ಪ್ರೀತಿ ಮತ್ತು ಬೆಂಬಲದೊಂದಿಗೆ ಸ್ಟ್ರೋಕ್ ಪೀಡಿತರು ಮತ್ತೊಮ್ಮೆ ಸುರಕ್ಷಿತ, ಅರ್ಥಪೂರ್ಣ ಹಾಗೂ ಹೆಚ್ಚು ಸ್ವಾವಲಂಬಿ ಜೀವನವನ್ನು ನಡೆಸುವ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು.
ಡಾ. ಶ್ರೀ ಕಲ್ಯಾಣಿ ಇ.
ಹಿರಿಯ ಫಿಸಿಯೋಥೆರಪಿಸ್ಟ್ ಹಾಗೂ ವಿಭಾಗದ ಮುಖ್ಯಸ್ಥರು
ಭಾರತಿ ಅಡ್ವಾನ್ಸ್ಡ್ ಫಿಸಿಯೋಥೆರಪಿ ಮತ್ತು ಆಟಿಸಂ ಪುನರ್ವಸತಿ ಕೇಂದ್ರ
ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ



