July 5, 2026
Sunday, July 5, 2026
spot_img

ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ಮರ್ಡರ್: ಅಕ್ಕನ ಸಂಸಾರ ಸರಿಪಡಿಸಲು ಬಂದ ಭಾವನನ್ನೇ ಮುಗಿಸಿದ ತಮ್ಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಗಳವಾಡಿಕೊಂಡು ತವರು ಮನೆಗೆ ಹೋಗಿದ್ದ ಪತ್ನಿಯನ್ನು ಒಪ್ಪಿಸಿ ಮರಳಿ ಮನೆಗೆ ಕರೆತರಲು ಅತ್ತೆ ಮನೆಗೆ ಹೋಗಿದ್ದ ವ್ಯಕ್ತಿಯ ಮೇಲೆ ಆತನ ಭಾವನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಅತ್ಯಂತ ಭೀಕರ ಘಟನೆ ಪಂಜಾಬ್‌ನ ತರ್ನ್ ತಾರನ್ ಜಿಲ್ಲೆಯಲ್ಲಿ ನಡೆದಿದೆ. ದುರಂತವೆಂದರೆ, ಬೆಂಕಿಯ ಜ್ವಾಲೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲು ಓಡಿ ಬಂದ ಮತ್ತೊಬ್ಬ ಮಹಿಳೆಯೂ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಈ ಇಡೀ ಆಘಾತಕಾರಿ ಘಟನೆಯ ಭೀಕರ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೌಟುಂಬಿಕ ಕಲಹ ತಂದ ಮಹಾ ದುರಂತ

ಹತ್ಯೆಯಾದ ಪತಿಯನ್ನು ಲವ್‌ಪ್ರೀತ್ ಸಿಂಗ್ ಮತ್ತು ಆತನನ್ನು ಬಚಾವ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆಯನ್ನು ಗುರ್ಜೀತ್ ಕೌರ್ ಎಂದು ಗುರುತಿಸಲಾಗಿದೆ. ಲವ್‌ಪ್ರೀತ್ ಸಿಂಗ್ ಮತ್ತು ಆತನ ಪತ್ನಿ ಸಂದೀಪ್ ಕೌರ್ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಸಂದೀಪ್ ಕೌರ್ ಕೋಪಗೊಂಡು ತವರು ಮನೆಗೆ ಹೋಗಿದ್ದರು. ಜೂನ್ 13 ರಂದು ಲವ್‌ಪ್ರೀತ್ ಸಿಂಗ್ ತನ್ನ ಪತ್ನಿಯನ್ನು ಸಮಾಧಾನಪಡಿಸಿ ಮನೆಗೆ ಕರೆದೊಯ್ಯಲು ಅತ್ತೆ ಮನೆಗೆ ಭೇಟಿ ನೀಡಿದ್ದನು.

ಮಾತುಕತೆಯ ವೇಳೆ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಂದೀಪ್ ಕೌರ್ ಸಹೋದರ ಸಾಜನ್ ಸಿಂಗ್, ಲವ್‌ಪ್ರೀತ್ ಮೇಲೆ ಪೆಟ್ರೋಲ್ ಸುರಿದು ದಾರುಣವಾಗಿ ಬೆಂಕಿ ಹಚ್ಚಿದ್ದಾನೆ.‌

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ

ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಸಿಸಿಟಿವಿ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಹಠಾತ್ ಆಗಿ ಮತ್ತೊಬ್ಬನಿಗೆ ಬೆಂಕಿ ಹಚ್ಚುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಲವ್‌ಪ್ರೀತ್ ಸಿಂಗ್ ಪ್ರಾಣಭಯದಿಂದ ಬೆಂಕಿ ನಂದಿಸಲು ಅತ್ತಿತ್ತ ಓಡುತ್ತಿರುವುದು ಸೆರೆಯಾಗಿದೆ.

ಈ ಹಂತದಲ್ಲಿ ಸಾಜನ್ ಸಿಂಗ್‌ನ ಅತ್ತಿಗೆ ಗುರ್ಜೀತ್ ಕೌರ್, ಲವ್‌ಪ್ರೀತ್‌ನನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಬೆಂಕಿಯ ಜ್ವಾಲೆ ತೀವ್ರವಾಗಿದ್ದರಿಂದ ಆಕೆಗೂ ಭೀಕರವಾಗಿ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಇಬ್ಬರೂ ಬೆಂಕಿಯ ಜ್ವಾಲೆಯ ನಡುವೆ ಸಿಲುಕಿ ಗಾಬರಿಯಿಂದ ಓಡಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ.

ಇದನ್ನೂ ಓದಿ:

ಆಸ್ಪತ್ರೆಯಲ್ಲಿ ಆರೋಪಿ

ಲವ್‌ಪ್ರೀತ್‌ಗೆ ಬೆಂಕಿ ಹಚ್ಚಿದ ಆರೋಪಿ ಸಾಜನ್ ಸಿಂಗ್‌ಗೂ ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಆತನನ್ನು ಪೊಲೀಸರ ಕಾವಲಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಸಿಟಿವಿ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ  ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !