October 21, 2026
Wednesday, October 21, 2026
spot_img

ನ್ಯೂಜಿಲೆಂಡ್ ಸರಣಿಯಿಂದ ಶಮಿ ಔಟ್: ಆಯ್ಕೆಗಾರರ ನಿರ್ಧಾರದ ಬಗ್ಗೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲೆಂಡ್ ಪ್ರವಾಸದ ಭಾರತ ತಂಡದಿಂದ ಕೈಬಿಟ್ಟ ಬೆನ್ನಲ್ಲೇ ತೀವ್ರ ಚರ್ಚೆಗೆ ಒಳಗಾಗಿದ್ದ ಹಿರಿಯ ವೇಗಿ ಮೊಹಮ್ಮದ್ ಶಮಿ, ತಮ್ಮ ನಿವೃತ್ತಿಯ ಕುರಿತು ಹಬ್ಬಿದ್ದ ಎಲ್ಲಾ ವದಂತಿಗಳಿಗೆ ಸ್ಪಷ್ಟತೆ ನೀಡಿದ್ದಾರೆ. ಬಂಗಾಳ ತಂಡದ ಪರ ರಣಜಿ ಟ್ರೋಫಿ ಪಂದ್ಯದಲ್ಲಿ ಸುದೀರ್ಘ ಸ್ಪೆಲ್ ಬೌಲಿಂಗ್ ಮಾಡಿ ಗಮನ ಸೆಳೆದಿರುವ 36 ವರ್ಷದ ಶಮಿ, ತಮ್ಮ ಅದ್ಭುತ ಫಾರ್ಮ್ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮೊಹಮ್ಮದ್ ಶಮಿ, ತಮ್ಮ ಫಿಟ್ನೆಸ್ ಹಾಗೂ ಬೌಲಿಂಗ್ ಲಯದ ಕುರಿತು ಯಾವುದೇ ಮುಚ್ಚುಮರೆ ಇಲ್ಲದೆ ಮಾತನಾಡಿದ್ದಾರೆ. “ನಾನು ಇಂದಿಗೂ ನನ್ನ ಫಾರ್ಮ್‌ನ ಉತ್ತುಂಗದಲ್ಲಿದ್ದೇನೆ. ಸುಳ್ಳು ಹೇಳುವ ಅಗತ್ಯವಿಲ್ಲ, ನಾನು ಹೇಗಿದ್ದೇನೋ ಹಾಗೇ ಅತ್ಯುತ್ತಮ ಲಯದಲ್ಲೇ ಇದ್ದೇನೆ” ಎಂದು ವಿಶ್ವಾಸದಿಂದ ನುಡಿದಿದ್ದಾರೆ.

ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ದೆಹಲಿ ವಿರುದ್ಧ ಅದ್ಭುತವಾಗಿ ಬೌಲಿಂಗ್ ಮಾಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರೂ, ಪ್ರಗ್ಯಾನ್ ಓಜಾ ನೇತೃತ್ವದ ಆಯ್ಕೆ ಸಮಿತಿಯು ಶಮಿ ಅವರನ್ನು ಏಕದಿನ ಹಾಗೂ ಟೆಸ್ಟ್ ಸರಣಿ ಎರಡರಿಂದಲೂ ಹೊರಗಿಟ್ಟಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ, ಅವರ ಸಮಕಾಲೀನ ಆಟಗಾರ ಭುವನೇಶ್ವರ್ ಕುಮಾರ್ ಸುಮಾರು 4 ವರ್ಷಗಳ ಬಳಿಕ ಟಿ20 ತಂಡಕ್ಕೆ ಮರಳಿರುವುದು ಗಮನಾರ್ಹ ಸಂಗತಿಯಾಗಿದೆ.

ರಾಷ್ಟ್ರೀಯ ಆಯ್ಕೆಗಾರರು ನಿಮ್ಮೊಂದಿಗೆ ಮಾತನಾಡಿದ್ದಾರೆಯೇ ಎಂಬ ನೇರ ಪ್ರಶ್ನೆಗೆ ಉತ್ತರಿಸಿದ ಶಮಿ, ಯಾವುದೇ ಅಳುಕಿಲ್ಲದೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ನಾನು ಸದ್ಯ ಭಾರತ ತಂಡದಲ್ಲಿಲ್ಲ, ನನ್ನೊಂದಿಗೆ ಯಾರು ಮಾತನಾಡುತ್ತಾರೆ? ಮತ್ತು ಅವರು ನನ್ನೊಂದಿಗೆ ಯಾಕೆ ಮಾತನಾಡಬೇಕು?” ಎಂದು ಮುಕ್ತವಾಗಿ ಪ್ರಶ್ನಿಸಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

ದೇಶಿ ಕ್ರಿಕೆಟ್‌ನಲ್ಲಿ ಶಮಿ ಕಡಿಮೆ ಓವರ್‌ಗಳ ಸ್ಪೆಲ್ ಎಸೆಯುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿರುವ ಅವರು, “ನಾನು ಒಂದೇ ಪಂದ್ಯದಲ್ಲಿ 35 ಕ್ಕೂ ಹೆಚ್ಚು ಓವರ್‌ಗಳನ್ನು ಬೌಲಿಂಗ್ ಮಾಡಿದ್ದೇನೆ ಎಂಬುದಕ್ಕೆ ಬೇಕಿದ್ದರೆ ಸ್ಕೋರ್‌ಕಾರ್ಡ್‌ಗಳ ಸ್ಕ್ರೀನ್‌ಶಾಟ್ ನೀಡುವೆ” ಎಂದು ತಮ್ಮ ಫಿಟ್‌ನೆಸ್ ಬಗ್ಗೆ ಪ್ರಶ್ನೆ ಮಾಡಿದವರಿಗೆ ದಿಟ್ಟ ಉತ್ತರ ನೀಡಿದ್ದಾರೆ.

ಮಾರ್ಚ್ 2025 ರ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡದ ಭಾಗವಾಗಿದ್ದ ಮೊಹಮ್ಮದ್ ಶಮಿ, ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಭಾರತಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಡುವುದೇ ತಮ್ಮ ಅಂತಿಮ ಗುರಿ ಎಂದು ಸ್ಪಷ್ಟಪಡಿಸಿರುವ ಅವರು, ಬಂಗಾಳ ತಂಡದ ಪರ ದೇಶಿ ಕ್ರಿಕೆಟ್‌ನಲ್ಲಿ ಸತತ ಪರಿಶ್ರಮ ಪಟ್ಟು, ಮತ್ತೊಮ್ಮೆ ಭಾರತ ರಾಷ್ಟ್ರೀಯ ತಂಡಕ್ಕೆ ಭರ್ಜರಿಯಾಗಿ ಕಂಬ್ಯಾಕ್ ಮಾಡುವ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read