ಹೊಸದಿಗಂತ ವರದಿ ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಸಂಭವಿಸಬಹುದಾದ ಅತಿವೃಷ್ಟಿ ಹಾಗೂ ಅನಾವೃಷ್ಟಿಯನ್ನು ಎದುರಿಸಲು ಸಜ್ಜಾಗುವಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಭಾನುವಾರ ರಾತ್ರಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಸದ್ಯ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ. ಆದ್ದರಿಂದ ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಬೇಕು. ಜೊತೆಗೆ ‘ಎಲ್ ನಿನೊ’ ಪರಿಣಾಮದಿಂದ ಕಡಿಮೆ ಮಳೆಯಾದಲ್ಲಿ ಅನಾವೃಷ್ಟಿಯನ್ನು ಸಹ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು. ಪ್ರಾಕೃತಿಕ ವಿಕೋಪಗಳು ಯಾರನ್ನೂ ಕೇಳಿ ಬರುವುದಿಲ್ಲ. ಆದರೆ, ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವುದು ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕೆಂದು ಯು.ಟಿ. ಖಾದರ್ ಅವರು ನಿರ್ದೇಶನ ನೀಡಿದರು.
ಮುಂದಿನ ಮೂರು ತಿಂಗಳಿನಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಸ್ಪಂದಿಸುವುದು ಅತಿ ಮುಖ್ಯವಾಗಿದೆ ಎಂದು ಸಚಿವರು ಹೇಳಿದರು. ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಧಿಕಾರಿಯವರ ಪಿ.ಡಿ. ಖಾತೆಯಲ್ಲಿ 3.05 ಕೋಟಿ ರೂಪಾಯಿ ಲಭ್ಯವಿದೆ. ಜೊತೆಗೆ 5 ತಾಲೂಕುಗಳ ತಹಶೀಲ್ದಾರ್ಗಳ ಪಿ.ಡಿ. ಖಾತೆಯಲ್ಲಿ ಒಟ್ಟು 141.39 ಲಕ್ಷ ರೂಪಾಯಿ ಲಭ್ಯವಿದೆ. ಹಾಗಾಗಿ ಹಣದ ಕೊರತೆಯಿಲ್ಲ ಎಂದರು. ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಗಮನಹರಿಸಬೇಕು. ಒಡೆದಿರುವ ಪೈಪ್ಲೈನ್ಗಳನ್ನು ಸರಿಪಡಿಸಬೇಕು. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಸಚಿವರು ಸೂಚಿಸಿದರು.
ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಎಚ್ಚರವಹಿಸಬೇಕು. ಮಳೆಗಾಲದಲ್ಲಿ ಹೆದ್ದಾರಿ ಬದಿ ಬೀಳುವ ಮರವನ್ನು ತೆರವುಗೊಳಿಸಬೇಕು. ಬೀಳುವ ಮರದ ಕೊಂಬೆಯನ್ನು ಕಡಿಯುವಂತಾಗಬೇಕು. ವಿದ್ಯುತ್ ಮಾರ್ಗಕ್ಕೆ ಮರದ ಕೊಂಬೆಗಳು ಬೀಳದಂತೆ ಕ್ರಮವಹಿಸಲು ಸೂಚಿಸಿದರು. ಗ್ರಾಮೀಣಾಭಿವೃದ್ಧಿ, ಸೆಸ್ಕ್ ಮತ್ತು ಅರಣ್ಯ ಮತ್ತಿತರ ಇಲಾಖೆ ಸಮನ್ವಯತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಕುಡಿಯುವ ನೀರು ಮತ್ತು ಸೆಸ್ಕ್ ವಿಭಾಗದ ಎಂಜಿನಿಯರ್ಗಳು ತಂಡವಾಗಿ ಕಾರ್ಯನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಗುಂಡಿಬಿದ್ದ ರಸ್ತೆಗಳಿಗೆ ವೆಟ್ಮಿಕ್ಸ್ ಅಳವಡಿಸಬೇಕು. ದುರಂತಗಳಿಗೆ ಅವಕಾಶ ನೀಡಬಾರದು ಎಂದು ಸಚಿವರು ಸೂಚಿಸಿದರು. ಶಾಲೆ, ಅಂಗನವಾಡಿಗಳಲ್ಲಿ ಮಳೆಗಾಲದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು. ಶುದ್ಧ ಕುಡಿಯುವ ನೀರು ಮತ್ತು ಗುಣಮಟ್ಟದ ಆಹಾರ ಪೂರೈಸಬೇಕು ಎಂದು ಸಚಿವರು ಸಲಹೆ ಮಾಡಿದರು.
ಪ್ರಾಕೃತಿಕ ವಿಕೋಪ ಸಂದರ್ಭ ಅನಾಹುತ ಸಂಭವಿಸಿದಲ್ಲಿ ಅಧಿಕಾರಿಗಳು ತಕ್ಷಣ ಭೇಟಿ ನೀಡಬೇಕು. ಜೊತೆಗೆ ನಿಯಮಾನುಸಾರ ಪರಿಹಾರ ನೀಡಬೇಕು. ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಂಕಷ್ಟದಲ್ಲಿರುವವರಿಗೆ ಆತ್ಮಸ್ಥೈರ್ಯ ಮತ್ತು ಮಾನಸಿಕ ಸ್ಥೈರ್ಯ ತುಂಬಬೇಕು. ಮುಂದಿನ ದಿನಗಳಲ್ಲಿ ವಿಭಾಗವಾರು ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಹೇಳಿದರು.
ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವಾಟ್ಸಾಪ್ ಸಂಖ್ಯೆ 8550001077, ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ 08272 221077, ಪೊಲೀಸ್ ಸಹಾಯವಾಣಿ 112, ಸೆಸ್ಕ್ 191ಗೆ ಕರೆ ಮಾಡಿ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದು ಸಚಿವರು ವಿವರಿಸಿದರು.



