September 28, 2026
Monday, September 28, 2026
spot_img

ಕರಾವಳಿಯಲ್ಲಿ ಮಳೆ ಕೈಕೊಟ್ಟರೂ ಕೈಬಿಡದ ಕಡಲು: ಕೈರಂಪಣಿ ಬಲೆಗಳಿಗೆ ಬೀಳುತ್ತಿದೆ ಭರ್ಜರಿ ಮೀನು!

ಹೊಸದಿಗಂತ ವರದಿ ಬೈಂದೂರು:

ಕರಾವಳಿ ಭಾಗದಲ್ಲಿ ಆಗಸ್ಟ್‌ ತಿಂಗಳ ಮಳೆ ಅಬ್ಬರ ಕಡಿಮೆಯಾಗಿರುವುದು ಮೀನುಗಾರರಲ್ಲಿ ಆತಂಕ ಮೂಡಿಸಿದ್ದರೂ, ಇದೀಗ ಕೈರಂಪಣಿ ಬಲೆಗಳಿಗೆ ಭರ್ಜರಿ ಮೀನು ಸಿಗುತ್ತಿರುವುದು ಕೊಂಚ ನೆಮ್ಮದಿ ತಂದಿದೆ. ಕಳೆದೊಂದು ವಾರದಿಂದ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯ ಹಲವು ಕಡೆಗಳಲ್ಲಿ ಉತ್ತಮ ಮೀನುಗಾರಿಕೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲೂ ತಾಜಾ ಮೀನುಗಳ ಲಭ್ಯತೆ ಹೆಚ್ಚಾಗಿದೆ.

ಮಳೆ ಕಡಿಮೆಯಾದರೂ ಮೀನುಗಾರಿಕೆಗೆ ಚೇತರಿಕೆ

ಮಳೆಗಾಲ ಆರಂಭವಾದ ಬಳಿಕ ಸಾಮಾನ್ಯವಾಗಿ ಒಂದೆರಡು ತಿಂಗಳು ಕೈರಂಪಣಿ ಬಲೆ ಮೂಲಕ ಮೀನುಗಾರಿಕೆ ನಡೆಯುತ್ತದೆ. ಒಂದು ಅಥವಾ ಎರಡು ದೋಣಿಗಳ ನೆರವಿನಿಂದ 30ರಿಂದ 40 ಮಂದಿ ಮೀನುಗಾರರು ಸೇರಿಕೊಂಡು ಈ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಾರೆ. ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಆರಂಭದಲ್ಲಿ ಮೀನುಗಾರರು ಆತಂಕಗೊಂಡಿದ್ದರು. ಆದರೆ ಕಳೆದೊಂದು ವಾರದಿಂದ ಬಲೆಗಳಿಗೆ ಉತ್ತಮ ಪ್ರಮಾಣದಲ್ಲಿ ಮೀನು ಬೀಳುತ್ತಿರುವುದು ಅವರಲ್ಲಿ ಉತ್ಸಾಹ ಮೂಡಿಸಿದೆ. ಉತ್ತಮ ಪ್ರಭೇದದ ಮೀನುಗಳು ದೊರೆಯುತ್ತಿದ್ದು, ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಾಗಿದೆ.

ಇದನ್ನೂ ಓದಿ:

ಶಿರೂರು ಭಾಗದಲ್ಲಿ ಉತ್ತಮ ಮೀನುಗಾರಿಕೆ

ಶಿರೂರು, ದೋಂಬೆ, ಕುಳಿಹಿತ್ಲು ಹಾಗೂ ಸೋಮೇಶ್ವರ ಸೇರಿದಂತೆ ಹಲವು ಕಡೆಗಳಲ್ಲಿ ಕಳೆದೊಂದು ವಾರದಿಂದ ಉತ್ತಮ ಮೀನುಗಾರಿಕೆ ನಡೆಯುತ್ತಿದೆ. ಮಂಗಳವಾರ ಶಿರೂರು ಕರಾವಳಿಯ ಮಹಾಗಣಪತಿ ಕೈರಂಪಣಿ ದೋಣಿಗೆ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಮೀನುಗಾರಿಕೆ ದೊರೆತಿದೆ ಎಂದು ತಿಳಿದುಬಂದಿದೆ. ಬಲೆಗೆ ಕೊಡವಾಯಿ, ಸಿಗಡಿ ಸೇರಿದಂತೆ ವಿವಿಧ ಜಾತಿಯ ಮೀನುಗಳು ಸಿಕ್ಕಿದ್ದು, ಅಪರೂಪದ ಮೀನುಗಳಿಗೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ತಾಜಾ ಮೀನುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಕೈರಂಪಣಿ ದೋಣಿಗಳಲ್ಲಿ ವಿವಿಧ ಪ್ರಭೇದದ ಮೀನುಗಳು ತಾಜಾವಾಗಿ ಸಿಗುತ್ತಿರುವುದರಿಂದ ಗ್ರಾಹಕರೂ ಹೆಚ್ಚಿನ ಸಂಖ್ಯೆಯಲ್ಲಿ ಮೀನು ಖರೀದಿಸಲು ಮುಂದಾಗುತ್ತಿದ್ದಾರೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳಿರುವ ಬೋಟ್‌ಗಳು ಎರಡು–ಮೂರು ದಿನಗಳ ಬಳಿಕ ದಡಕ್ಕೆ ಮರಳುವ ಸಂದರ್ಭದಲ್ಲಿ ಕೈರಂಪಣಿ ಮೀನುಗಾರಿಕೆಯಿಂದ ಸ್ಥಳೀಯ ಮಾರುಕಟ್ಟೆಗೆ ತಾಜಾ ಮೀನುಗಳ ಪೂರೈಕೆ ಆಗುತ್ತಿದೆ. ಶಿರೂರು, ಉಪ್ಪುಂದ, ದೋಂಬೆ, ಬೈಂದೂರು, ಕುಳಿಹಿತ್ಲು ಹಾಗೂ ಸೋಮೇಶ್ವರ ಸೇರಿದಂತೆ ಹಲವು ಕರಾವಳಿ ಪ್ರದೇಶಗಳಲ್ಲಿ ಸೆಪ್ಟೆಂಬರ್‌ ತಿಂಗಳಲ್ಲೂ ಕೈರಂಪಣಿ ಮೀನುಗಾರಿಕೆ ಮುಂದುವರಿಯುವ ನಿರೀಕ್ಷೆ ಇದೆ.

Must Read