ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜಕಾರಣದಲ್ಲಿ ಮುಡಾ ಬದಲಿ ನಿವೇಶನ ಹಂಚಿಕೆ ಹಗರಣದ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಡಾ. ಯತೀಂದ್ರ ಖಾತೆ ಬದಲಾವಣೆಗೆ ತೀವ್ರ ಒತ್ತಡ ವ್ಯಕ್ತವಾಗಿದೆ. ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿರುವ ಡಾ. ಯತೀಂದ್ರ ಅವರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ಖಾತೆಯಿಂದ ಮುಕ್ತಿ ನೀಡಿ, ಬದಲಿ ಇಲಾಖೆಯನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ‘ನೈಜ ಹೋರಾಟಗಾರರ ವೇದಿಕೆ’ ಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ ಪತ್ರ ಬರೆದು ಆಗ್ರಹಿಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬದಲಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಯತೀಂದ್ರ ತಂದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿದ್ದು, ತಾಯಿ ಪಾರ್ವತಿ ಎರಡನೇ ಆರೋಪಿಯಾಗಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ಜೊತೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕ್ರಿಮಿನಲ್ ಪ್ರಕರಣ, ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣವೂ ದಾಖಲಾಗಿ ಸದ್ಯ ವಿಚಾರಣೆಯ ಹಂತದಲ್ಲಿದೆ.
ವೇದಿಕೆಯ ಪರವಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ಬರೆದಿರುವ ಪತ್ರದಲ್ಲಿ ಗಂಭೀರ ಕಾನೂನು ಮತ್ತು ನೈತಿಕ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಮುಡಾ ಹಗರಣದಲ್ಲಿ ಯತೀಂದ್ರರ ತಂದೆ ಮತ್ತು ತಾಯಿಯೇ ಪ್ರಮುಖ ಆರೋಪಿಗಳಾಗಿದ್ದಾರೆ. ಹೀಗಿರುವಾಗ ಅವರ ಮಗನೇ ಇಡೀ ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿ ಅಧಿಕಾರ ಚಲಾಯಿಸುವುದು ಮತ್ತು ನಿರ್ಧಾರಗಳನ್ನು ಕೈಗೊಳ್ಳುವುದು ಖಂಡಿತವಾಗಿಯೂ ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ ಎನ್ನಲಾಗಿದೆ.



