ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಫಿಫಾ ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ಪೋರ್ಚುಗಲ್ ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಡಲ್ಲಾಸ್ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಫಾರ್ಮ್ ಹಾಗೂ ನಿವೃತ್ತಿ ಕುರಿತು ಕೇಳಲಾದ ಸರಣಿ ಪ್ರಶ್ನೆಗಳಿಗೆ ರೊನಾಲ್ಡೊ ತೀಕ್ಷ್ಣವಾಗಿ ಉತ್ತರಿಸಿದ್ದಾರೆ.
“ಕಳೆದ 23 ವರ್ಷಗಳಿಂದ ನೀವು ನನ್ನ ವೃತ್ತಿಜೀವನವನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದೀರಿ. ಆದರೆ ಅದು ಸಮಯದ ಪೋಲು ಎಂಬುದು ಈಗ ನಿಮಗೇ ಮನವರಿಕೆಯಾಗಿರಬೇಕು” ಎಂದು ಟೀಕಾಕಾರರ ವಿರುದ್ಧ ಗುಡುಗಿದ್ದಾರೆ.
ಕೊನೆಯ ವಿಶ್ವಕಪ್‌ನಲ್ಲಿ ರೊನಾಲ್ಡೊ ಅಬ್ಬರ
41ನೇ ವಯಸ್ಸಿನಲ್ಲಿ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಅವರು, “ನಾನು ಮೊದಲಿನ ವೇಗದಲ್ಲಿ ಆಡುತ್ತಿಲ್ಲ ನಿಜ, ಆದರೆ ನಾನೇನು ಕಳಪೆಯಾಗಿ ಆಡುತ್ತಿಲ್ಲ. ಪ್ರಸಕ್ತ ಟೂರ್ನಿಯಲ್ಲೇ ಈಗಾಗಲೇ 3 ಗೋಲುಗಳನ್ನು ಬಾರಿಸಿದ್ದೇನೆ” ಎಂದು ತಮ್ಮ ಸಾಮರ್ಥ್ಯವನ್ನು ನೆನಪಿಸಿದರು. ಇದೇ ವೇಳೆ ತಮಗೆ ಇಷ್ಟವಿಲ್ಲದ ಪತ್ರಕರ್ತ ಮಾರ್ಸೆಲೊ ಬೆಕ್ಲರ್ ಅವರನ್ನು ಗುರುತಿಸಿ, “ಅವನಿಗೆ ಮೈಕ್ ಕೊಡಿ, ನನಗೆ ಮುಖಗಳು ಚೆನ್ನಾಗಿ ನೆನಪಿರುತ್ತವೆ” ಎಂದು ನಗುತ್ತಲೇ ಕಾಲೆಳೆದರು.
ನಿವೃತ್ತಿ ಬಗ್ಗೆ ಸ್ಪಷ್ಟನೆ
ಮಾಧ್ಯಮಗಳ ಒತ್ತಡಕ್ಕೆ ಮಣಿದು ನಿವೃತ್ತಿಯಾಗಲ್ಲ ಎಂದ ರೊನಾಲ್ಡೊ, ತಮಗೆ ಸರಿ ಎನಿಸಿದಾಗ ಮಾತ್ರ ಆಟದಿಂದ ಹಿಂದೆ ಸರಿಯುವುದಾಗಿ ಸ್ಪಷ್ಟಪಡಿಸಿದರು. ಆದಾಗ್ಯೂ, ಇದು ತಮ್ಮ ಕೊನೆಯ ವಿಶ್ವಕಪ್ ಪಂದ್ಯಾವಳಿ ಎಂಬುದನ್ನು ಖಚಿತಪಡಿಸಿದ ಅವರು, ಈ ವಯಸ್ಸಿನಲ್ಲೂ ತನ್ನ ಮೇಲಾಗುವ ದಾಳಿಗಳು ಹಾಗೂ ಟೀಕೆಗಳೇ ತಾನು ಇನ್ನಷ್ಟು ಬೆಳೆಯಲು ಸಹಾಯ ಮಾಡುತ್ತವೆ ಎಂದು ಭಾವುಕರಾಗಿ ನುಡಿದರು.



