ಹೊಸದಿಗಂತ ವರದಿ ಬೆಳಗಾವಿ:
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಪ್ರಮುಖ ನದಿಗಳಾದ ಕೃಷ್ಣಾ ಮತ್ತು ಮಲಪ್ರಭಾ ಭೋರ್ಗರೆದು ಹರಿಯುತ್ತಿವೆ.
ನದಿಗಳ ನೀರಿನ ಮಟ್ಟ ಅತ್ಯಂತ ವೇಗವಾಗಿ ಏರಿಕೆಯಾಗುತ್ತಿರುವುದರಿಂದ ನದೀತೀರದ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಹಲವು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ಜಿಲ್ಲೆಯಾದ್ಯಂತ ಸಾರ್ವಜನಿಕ ಸಾರಿಗೆ ಮತ್ತು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಜಲಾವೃತಗೊಂಡ ಸೇತುವೆಗಳು:
ಪರ್ಯಾಯ ಮಾರ್ಗ ಅವಲಂಬಿಸಿದ ಭಕ್ತರು ಧಾರಾಕಾರ ಮಳೆಯ ಪರಿಣಾಮವಾಗಿ ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಯಾದ ಕಲ್ಲೋಳ–ಯಡೂರ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ಈ ಮಾರ್ಗದ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ವಿಶೇಷವಾಗಿ, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಯಡೂರ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಇದರಿಂದ ತೀವ್ರ ತೊಂದರೆಯಾಗಿದೆ. ಪ್ರಸ್ತುತ ದೇವಸ್ಥಾನಕ್ಕೆ ಭೇಟಿ ನೀಡುವ ಸಾರ್ವಜನಿಕರು ಮತ್ತು ಭಕ್ತಾದಿಗಳು ಅಂಕಲಿ ಮತ್ತು ಮಾಂಜರಿ ಗ್ರಾಮಗಳ ಮೂಲಕ ಸುತ್ತುಬಳಸಿ, ಪರ್ಯಾಯ ಮಾರ್ಗದ ಮೂಲಕ ಸಂಚರಿಸುತ್ತಿದ್ದಾರೆ.
4 ದಿನಗಳ ನಿರಂತರ ಮಳೆ:
ಮೈದುಂಬಿದ ಮಲಪ್ರಭಾ, ರೈತರಲ್ಲಿ ಮೂಡಿದ ಭರವಸೆ. ಖಾನಾಪುರ ತಾಲೂಕಿನ ಜಂಬೋಟಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ನದಿಯಲ್ಲಿ ಸದ್ಯ ೨,೦೬೯ ಕ್ಯೂಸೆಕ್ ನೀರಿನ ಹರಿವು ದಾಖಲಾಗಿದೆ.
ಇದನ್ನೂ ಓದಿ:
ಕಳೆದ ಒಂದು ತಿಂಗಳಿನಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ಮತ್ತು ಬಿತ್ತನೆ ಕಾರ್ಯದ ಕುರಿತು ಆತಂಕದಲ್ಲಿದ್ದ ಈ ಭಾಗದ ರೈತರಿಗೆ, ಈ ನಾಲ್ಕು ದಿನಗಳ ನಿರಂತರ ಮಳೆಯು ಹೊಸ ಆಶಾಕಿರಣವನ್ನು ಮೂಡಿಸಿದೆ. ಜಲಮೂಲಗಳು ಮರುಜೀವ ಪಡೆದುಕೊಳ್ಳುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ತಂದಿದೆ.
ಹೆಬ್ಬನಟ್ಟಿ ಮಾರುತಿ ಮಂದಿರ ಸಂಪೂರ್ಣ ಮುಳುಗಡೆ ಪೂಜೆ ಸ್ಥಗಿತ:
ಖಾನಾಪುರ ತಾಲೂಕಿನ ಹೆಬ್ಬನಟ್ಟಿಯಲ್ಲಿರುವ ಐತಿಹಾಸಿಕ ಮತ್ತು ಪ್ರಸಿದ್ಧ ಸ್ವಯಂಭೂ ಮಾರುತಿ ದೇವಸ್ಥಾನವು ನದಿ ನೀರಿನಿಂದಾಗಿ ಸಂಪೂರ್ಣ ಜಲಾವೃತಗೊಂಡಿದೆ. ಗರ್ಭಗುಡಿಯೊಳಗೆ ನೀರು ನುಗ್ಗಿದ್ದು, ಸ್ವಯಂಭೂ ಮಾರುತಿ ದೇವರ ಮೂರ್ತಿ ಸೇರಿದಂತೆ ಶ್ರೀರಾಮ, ಸೀತಾ ಮತ್ತು ಲಕ್ಷ್ಮಣರ ವಿಗ್ರಹಗಳು ನೀರಿನಲ್ಲಿ ಮುಳುಗಿವೆ.
ಕಳೆದ ನಾಲ್ಕು ದಿನಗಳಿಂದ ದೇವಸ್ಥಾನದಲ್ಲಿ ಯಾವುದೇ ಪೂಜೆ-ಪುನಸ್ಕಾರಗಳು ನಡೆಯುತ್ತಿಲ್ಲ. ದರ್ಶನಕ್ಕಾಗಿ ಬರುವ ಭಕ್ತರು ಅನಿವಾರ್ಯವಾಗಿ ದೇವಸ್ಥಾನದ ಹೊರಭಾಗದಲ್ಲೇ ನಿಂತು ದೂರದಿಂದಲೇ ದೇವರಿಗೆ ಕೈಮುಗಿದು ವಾಪಸಾಗುತ್ತಿದ್ದಾರೆ.
ನದೀತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಮತ್ತು ನದಿ ಸನಿಹ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.



