ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಬ್ರಿಡ್ಜ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರಧ್ವಾಜ್ ಅವರು ಇಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಸುಳ್ಯದ ಕೆವಿಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

ಪದ್ಮಶ್ರೀ ಪ್ರಶಸ್ತಿ
ದುರ್ಗಮ ಕಾಡುಗಳು, ನದಿ ದಾಟಲು ದೋಣಿಯನ್ನೇ ಅವಲಂಬಿಸಿದ್ದ ಎಷ್ಟೋ ಜನರಿಗೆ ಗಿರೀಶ್ ಅವರ ತೂಗುಸೇತುವೆಗಳು ನೆಮ್ಮದಿ ನೀಡಿದ್ದವು. ಕರ್ನಾಟಕ ಮಾತ್ರವಲ್ಲದೆ ಕೇರಳ, ಒಡಿಶಾ, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 120ಕ್ಕೂ ಹೆಚ್ಚು ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದ ತೂಗು ಸೇತುವೆಗಳನ್ನು ನಿರ್ಮಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ಈ ಅದ್ವಿತೀಯ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ 2017 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ನೀಡಿ ಗೌರವಿಸಿತ್ತು.

ಹೀಗೆ ಆರಂಭವಾಯ್ತು ಪಯಣ
ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದ ಗಿರೀಶ್ ಭಾರಧ್ವಾಜ್ ಅವರು ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಜನರು ಒಂದು ನದಿ ದಾಟಲು ಎಷ್ಟು ಸುತ್ತಬೇಕಿತ್ತು. ತುರ್ತು ಸಂದರ್ಭದಲ್ಲಿ ಯಾವೆಲ್ಲಾ ರೀತಿಯ ಅನಾಹುತಗಳು ಸಂಭವಿಸುತ್ತವೆ ಎನ್ನುವುದನ್ನು ನೋಡಿದ್ದರು. ಇವನ್ನೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಂಡು ಮೊದಲ ಬಾರಿಗೆ 989ರಲ್ಲಿ ತಮ್ಮ ಸ್ವಗ್ರಾಮವಾದ ಸುಳ್ಯದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಮೊದಲ ಕಡಿಮೆ ವೆಚ್ಚದ ತೂಗು ಸೇತುವೆಯನ್ನು ನಿರ್ಮಿಸುವ ಮೂಲಕ ತಮ್ಮ ಐತಿಹಾಸಿಕ ಪಯಣವನ್ನು ಆರಂಭಿಸಿದರು.



