November 11, 2026
Wednesday, November 11, 2026
spot_img

ಹಣಕಾಸಿನ ಗಲಾಟೆ ತಡೆಯಲು ಮುಂದಾದ ವ್ಯಕ್ತಿಯ ಮೇಲೆ ಗಂಭೀರ ಹ*ಲ್ಲೆ: ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ?

ಹೊಸದಿಗಂತ ವರದಿ ಬೆಳಗಾವಿ:

ಹಣಕಾಸಿನ ವಿಚಾರಕ್ಕೆ ನಾಲೈದು ಜನರ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಮುಂದಾದ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಘಟನೆ ನಗರದ ಸದಾಶಿವ ನಗರದ ಕೆಫೆಯೊಂದರಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಸದಾಶಿವ ನಗರದ ನಿವಾಸಿ ಸಲ್ಮಾನ್ ಬಾಗೇವಾಡಿ ಚೂರಿ ಇರಿತಕ್ಕೊಳಗಾದವರಾಗಿದ್ದು, ಗಾಯಗೊಂಡ ಅವರನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಫೆಯೊಂದರಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಾಲೈದು ಜನರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ವೇಳೆ ಅಲ್ಲಿದ್ದ ಸಲ್ಮಾನ್ ಬಾಗೇವಾಡಿ ಅವರು ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾರೆ ಎನ್ನಲಾಗಿದೆ.

ಹಣಕಾಸಿನ ವಿಚಾರವಿದ್ದರೆ ಮನೆಯಲ್ಲಿಯೇ ಕುಳಿತು ಮಾತನಾಡಿಕೊಳ್ಳಿ. ಸಾರ್ವಜನಿಕ ಸ್ಥಳದಲ್ಲಿ ನಿಂತು ಏಕೆ ಜಗಳವಾಡುತ್ತೀರಿ ಎಂದು ಸಲ್ಮಾನ್ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮಾತಿನ ಚಕಮಕಿ ಮತ್ತಷ್ಟು ತೀವ್ರಗೊಂಡಿದ್ದು, ಈ ಸಂದರ್ಭದಲ್ಲಿ ಅವರ ಮೇಲೆ ಚೂರಿಯಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ಇನ್ನು ಸಬೀಲ್ ಫರ್ಜಾದೆ ಎಂಬಾತನ ಗ್ಯಾಂಗ್‌ನವರು ತನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಗಾಯಾಳು ಸಲ್ಮಾನ್ ಬಾಗೇವಾಡಿ ಆರೋಪಿಸಿದ್ದಾರೆ. ಘಟನೆಯಿಂದ ಸದಾಶಿವ ನಗರ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಣಕಾಸಿನ ವಿಚಾರದ ಜಗಳ ಬಿಡಿಸಲು ಹೋದ ವ್ಯಕ್ತಿಯೇ ಚೂರಿ ಇರಿತಕ್ಕೆ ಒಳಗಾಗಿರುವುದು ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಘಟನೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Must Read

Skip to toolbar