ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ವಿರುದ್ಧ ಸ್ಪೇನ್ 1-0 ಗೋಲು ಅಂತರದ ಜಯಗಳಿಸಿದೆ. ಈ ಮೂಲಕ ಸ್ಪೇನ್ ಕ್ವಾಟರ್‌ಫೈನಲ್ಸ್‌ಗೆ ಲಗ್ಗೆಯಿಟ್ಟಿದ್ದು, ಪೋರ್ಚುಗಲ್ ತಂಡ ಹೊರಬಿದ್ದಿದೆ.
ಇದರೊಂದಿಗೆ ಪೋರ್ಚುಗಲ್‌ನ ಫುಟ್‌ಬಾಲ್ ದಿಗ್ಗಜ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೋ ವಿಶ್ವಕಪ್ ಕನಸು ಭಗ್ನಗೊಂಡಿದೆ.
ಪಂದ್ಯದ ದ್ವಿತೀಯಾರ್ಧದ ಇಂಜುರಿ ಟೈಮ್‌ನಲ್ಲಿ (90+1 ನಿಮಿಷದಲ್ಲಿ) ಬದಲಿ ಆಟಗಾರನಾಗಿ ಕಣಕ್ಕಿಳಿದ ಮೈಕೆಲ್ ಮೆರಿನೊ ಅದ್ಭುತ ಗೋಲು ಬಾರಿಸುವ ಮೂಲಕ ಸ್ಪೇನ್‌ಗೆ ಸ್ಮರಣೀಯ ಗೆಲುವು ತಂದುಕೊಟ್ಟರು. 2010ರ ಚಾಂಪಿಯನ್ ಸ್ಪೇನ್, ಇದೀಗ ಮಗದೊಂದು ಸಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅಲ್ಲದೇ ಫಿಫಾ ವಿಶ್ವಕಪ್‌ನಲ್ಲಿ ಸತತ 6 ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದ ಸಾಧನೆ ಮಾಡಿದ ಮೊದಲ ತಂಡವೆನಿಸಿದೆ.
ಸೋಲಿನ ಬಳಿಕ ರೊನಾಲ್ಡೋ ಮೈದಾನದಲ್ಲೇ ಕಣ್ಣೀರಿಟ್ಟು ಭಾವುಕರಾದರು. ಒಂದು ಕಡೆ ಸ್ಪೇನ್ ಗೆಲುವಿನ ಕೆಕೆ ಹಾಕಿದ್ರೆ, ರೊನಾಲ್ಡೋ ಅವರ ವಿಶ್ವಕಪ್ ಪಯಣ ಕಣ್ಣೀರಿನೊಂದಿಗೆ ಅಂತ್ಯಗೊಂಡಿತು.



