ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರಂಭದಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ರಮೇಶ್ ಇಂದಿರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಜುಲೈ 24ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ಕರಾವಳಿ ಸಂಸ್ಕೃತಿ, ಕಂಬಳಕ್ಕೆ ವಿಶೇಷ ಒತ್ತು
ಟ್ರೇಲರ್‌ನಲ್ಲಿ ಕರಾವಳಿ ಭಾಗದ ಸಂಸ್ಕೃತಿ, ಸಂಪ್ರದಾಯ ಹಾಗೂ ಹೆಮ್ಮೆಯ ಕಂಬಳ ಕ್ರೀಡೆಯನ್ನು ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ. ದೃಶ್ಯ ವೈಭವ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
380 ಕೋಣಗಳೊಂದಿಗೆ ಚಿತ್ರೀಕರಣ
ಟ್ರೇಲರ್ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ, ಸುಮಾರು 380 ಕೋಣಗಳನ್ನು ಬಳಸಿಕೊಂಡು ಕಂಬಳ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ, ಇತ್ತೀಚೆಗೆ ಚರ್ಚೆಗೆ ಕಾರಣವಾಗಿದ್ದ ಪ್ರಜ್ವಲ್ ದೇವರಾಜ್ ಅವರ ಡಬ್ಬಿಂಗ್ ಹಾಗೂ ಸಂಭಾವನೆ ವಿಚಾರಕ್ಕೂ ತಮ್ಮದೇ ಆದ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:
ಪ್ರಜ್ವಲ್ ಗೈರು, ಕುತೂಹಲ ಹೆಚ್ಚಿದ ಡಬ್ಬಿಂಗ್ ಚರ್ಚೆ
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ರಾಜ್ ಬಿ. ಶೆಟ್ಟಿ, ಸಂಪದಾ, ಸುಷ್ಮಿತಾ, ಮಿತ್ರ, ಶ್ರೀಧರ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಭಾಗವಹಿಸಿದ್ದರು. ಆದರೆ ನಾಯಕ ಪ್ರಜ್ವಲ್ ದೇವರಾಜ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ. ಟ್ರೇಲರ್‌ನಲ್ಲಿ ಅವರ ಧ್ವನಿ ಇಲ್ಲದಿರುವ ಬಗ್ಗೆ ಅವರು ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಜುಲೈ 24ಕ್ಕೆ ತೆರೆಗೆ ಸಿನಿಮಾ
ಗುರುದತ್ ಗಾಣಿಗ ನಿರ್ದೇಶನದ ಈ ಚಿತ್ರವನ್ನು ವಿ.ಕೆ. ಫಿಲ್ಮ್ಸ್ ಹಾಗೂ ಗಾಣಿಗ ಫಿಲ್ಮ್ಸ್ ನಿರ್ಮಿಸಿದ್ದು, ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ. ಟ್ರೇಲರ್‌ನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ. ಶೆಟ್ಟಿ ಪಾತ್ರಗಳ ನಡುವಿನ ಸಂಬಂಧವನ್ನು ಸಸ್ಪೆನ್ಸ್ ಆಗಿಯೇ ಉಳಿಸಲಾಗಿದ್ದು, ಸಿನಿಮಾ ಕುರಿತು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.



