ಹೊಸದಿಗಂತ ವರದಿ ಹಾಸನ :
ಜಿಲ್ಲೆಯ ವಿಶ್ವವಿಖ್ಯಾತ ಐತಿಹಾಸಿಕ ಹಾಗೂ ಹೊಯ್ಸಳರ ವಾಸ್ತುಶಿಲ್ಪದ ಹೆಮ್ಮೆಯ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದ ವೇಳೆ ಸುಮಾರು ₹1.98 ಲಕ್ಷ ಹಣವನ್ನು ಎಗರಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು, ಸ್ಥಳದಲ್ಲೇ ಆರೋಪಿಯನ್ನು ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ದೇವಾಲಯದಲ್ಲಿ ಇಂದು ಬೆಳಗ್ಗೆಯಿಂದಲೇ ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಾನುಸಾರ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಎಣಿಕೆ ಪ್ರಕ್ರಿಯೆಯ ಛಾಯಾಗ್ರಹಣ ಹಾಗೂ ವಿಡಿಯೋಗ್ರಫಿ ನಡೆಸಲು ಆಗಮಿಸಿದ್ದ ಬೇಲೂರು ಪಟ್ಟಣದ ವಾಸಿಯಾದ ನೀಲಕಂಠ ಎಂಬಾತ, ಹುಂಡಿಯಿಂದ ಹೊರಬಂದಿದ್ದ ಹಣದಲ್ಲಿ ₹1,98,000 ನಗದನ್ನು ತನ್ನ ಜರ್ಕಿನ್ ಒಳಗೆ ಅಡಗಿಸಿಕೊಂಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.
ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿಗೆ ಆತನ ನಡೆ-ನುಡಿಗಳ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ತಕ್ಷಣವೇ ಪರಿಶೀಲನೆ ನಡೆಸಲಾಯಿತು. ಈ ವೇಳೆ ಆತನ ಬಳಿ ಹಣ ಪತ್ತೆಯಾಗಿದ್ದು, ಸಿಬ್ಬಂದಿ ಸ್ಥಳದಲ್ಲೇ ಆರೋಪಿಯನ್ನು ಹಿಡಿದು ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ದೇವಾಲಯದ ಹುಂಡಿ ಎಣಿಕೆ ಕಾರ್ಯದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಕುರಿತು ಮಾತನಾಡಿದ ತಹಶೀಲ್ದಾರ್ ಶ್ರೀಧರ ಕಂಕನವಾಡಿ, ಘಟನೆ ಸಂಬಂಧ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆರೋಪಿಯ ವಿರುದ್ಧ ದೇವಾಲಯದ ಹಣ ಎಗ್ಗರಿಸಿದ ಆರೋಪದಡಿ ದೂರು ದಾಖಲಿಸಲಾಗಿದ್ದು, ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ದೇವಾಲಯದ ಹುಂಡಿ ಎಣಿಕೆ ವೇಳೆ ಕಟ್ಟುನಿಟ್ಟಿನ ಭದ್ರತೆ ಹಾಗೂ ಸಿಸಿಟಿವಿ ನಿಗಾವ್ಯವಸ್ಥೆ ಇರುವುದರಿಂದ ಘಟನೆ ತಕ್ಷಣವೇ ಬೆಳಕಿಗೆ ಬಂದಿದ್ದು, ಆರೋಪಿಯ ಕೃತ್ಯ ವಿಫಲವಾಗಿದೆ. ಸಿಸಿಟಿವಿ ದೃಶ್ಯಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗಲಿವೆ ಎಂದು ಮೂಲಗಳು ತಿಳಿಸಿವೆ.
ವಿಶ್ವದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುವ ಐತಿಹಾಸಿಕ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಇಂತಹ ಘಟನೆ ನಡೆದಿರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿದ್ದು, ದೇವಾಲಯದ ಹಣದ ಸುರಕ್ಷತೆ ಹಾಗೂ ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿಚಾರಣೆ ನಡೆಸುತ್ತಿದ್ದು, ಘಟನೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.



