ಅವಲಕ್ಕಿ ವಡೆ ದಕ್ಷಿಣ ಭಾರತದ ಒಂದು ಜನಪ್ರಿಯ ಸ್ನ್ಯಾಕ್ ಆಗಿದೆ. ಸಾಮಾನ್ಯವಾಗಿ ವಡೆ ಮಾಡಲು ಉದ್ದಿನಬೇಳೆ ಅಥವಾ ಕಡಲೆಬೇಳೆಯನ್ನು ಗಂಟೆಗಟ್ಟಲೆ ನೆನೆಸಿ, ರುಬ್ಬಬೇಕಾಗುತ್ತದೆ. ಆದರೆ ಈ ಅವಲಕ್ಕಿ ವಡೆಗೆ ಯಾವುದೇ ಬೇಳೆ ನೆನೆಸುವ ಅಥವಾ ರುಬ್ಬುವ ಜಂಜಾಟ ಇರುವುದಿಲ್ಲ. ಮನೆಯಲ್ಲಿ ದಿಢೀರನೆ ನೆಂಟರು ಬಂದಾಗ ಅಥವಾ ಸಂಜೆ ಚಹಾ ಜತೆ ಕುರುಕಲು ತಿನ್ನಬೇಕೆನಿಸಿದಾಗ ಕೇವಲ 15 ನಿಮಿಷಗಳಲ್ಲಿ ಇದನ್ನು ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು
ಅವಲಕ್ಕಿ
ಗಟ್ಟಿ ಮೊಸರು
ಅಕ್ಕಿ ಹಿಟ್ಟು
ಈರುಳ್ಳಿ
ಹಸಿ ಮೆಣಸಿನಕಾಯಿ
ಶುಂಠಿ ತುರಿ
ಜೀರಿಗೆ
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು
ಎಣ್ಣೆ
ಉಪ್ಪು
ಮಾಡುವ ವಿಧಾನ
ಮೊದಲು ಅವಲಕ್ಕಿಯನ್ನು ಒಂದು ಜರಡಡಿಯಲ್ಲಿ ಹಾಕಿ 2 ಬಾರಿ ಚೆನ್ನಾಗಿ ತೊಳೆದುಕೊಂಡು. 5 ನಿಮಿಷ ಬಿಡಬೇಕು. ನಂತರ ಅವಲಕ್ಕಿಯನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ 1/2 ಕಪ್ ಗಟ್ಟಿ ಮೊಸರು ಸೇರಿಸಿ ಚೆನ್ನಾಗಿ ಮ್ಯಾಶ್ ಮಾಡಿ, ಅಕ್ಕಿ ಹಿಟ್ಟು, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಹಾಕದೆ ವಡೆ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿಕೊಳ್ಳಬೇಕು.
ನಂತರ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಕಲಸಿದ ಹಿಟ್ಟಿನಿಂದ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ. ಅಂಗೈ ಮೇಲೆ ಇಟ್ಟು ವಡೆಯಂತೆ ತಟ್ಟಿ, ಮಧ್ಯದಲ್ಲಿ ಒಂದು ಸಣ್ಣ ಹೋಲ್ ಮಾಡಿ. ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಎಣ್ಣೆ ಕಾದ ನಂತರ ಸಿದ್ಧಪಡಿಸಿದ ವಡೆಗಳನ್ನು ಒಂದೊಂದಾಗಿ ಹಾಕಿ, ಎರಡು ಕಡೆ ಹೊಂಬಣ್ಣ ಹಾಗೂ ಗರಿಗರಿಯಾಗುವವರೆಗೆ ಚೆನ್ನಾಗಿ ಕರಿದರೆ, ಗರಿಗರಿಯಾದ ಅವಲಕ್ಕಿ ವಡೆ ಸವಿಯಲು ಸಿದ್ಧ.



