November 25, 2026
Wednesday, November 25, 2026
spot_img

ಭಾರತೀಯ ವಸ್ತುಗಳ ಮೇಲೆ ಶೇ. 25, ಚೀನಾ ಮೇಲೆ ಶೇ. 40ರಷ್ಟು ಹೊಸ ಸುಂಕ ವಿಧಿಸಲು ಅಮೆರಿಕ ಪ್ರಸ್ತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ವ್ಯಾಪಾರ ವಲಯಕ್ಕೆ ಮತ್ತೊಂದು ಶಾಕ್ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಸೇರಿದಂತೆ 14 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಸರಕುಗಳ ಮೇಲೆ ಹೊಸ ಆಮದು ಸುಂಕ ವಿಧಿಸಲು ಪ್ರಸ್ತಾಪಿಸಿದ್ದಾರೆ.

 ‘ಹೆಚ್ಚುವರಿ ಕೈಗಾರಿಕಾ ಸಾಮರ್ಥ್ಯ’ ಹೊಂದಿರುವ ಕಾರಣಕ್ಕಾಗಿ ಭಾರತೀಯ ವಸ್ತುಗಳ ಮೇಲೆ ಗರಿಷ್ಠ ಶೇ. 25ರಷ್ಟು ಹಾಗೂ ಚೀನಾ ಸರಕುಗಳ ಮೇಲೆ ಅತಿ ಹೆಚ್ಚು ಅಂದರೆ ಶೇ. 40ರಷ್ಟು ಸುಂಕ ಹೇರಲು ಶಿಫಾರಸು ಮಾಡಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು ‘ಸೆಕ್ಷನ್ 301’ ಅಡಿಯಲ್ಲಿ 16 ದೇಶಗಳ ವ್ಯಾಪಾರ ನೀತಿಗಳ ಕುರಿತು ಕಳೆದ ಎಂಟು ತಿಂಗಳಿನಿಂದ ನಡೆಸಿದ ತನಿಖೆಯ ಬಳಿಕ ಈ ಮಹತ್ವದ ಪ್ರಸ್ತಾವನೆ ಮುಂದಿಟ್ಟಿದೆ.

ಹೊಸ ಸುಂಕ ಪ್ರಸ್ತಾಪಕ್ಕೆ ಕಾರಣವೇನು?

ಮಾರುಕಟ್ಟೆಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ಉತ್ಪಾದಿಸುವ ಮೂಲಕ ಕೆಲವು ದೇಶಗಳು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಅಸಮತೋಲನ ಸೃಷ್ಟಿಸುತ್ತಿವೆ. ಇದರಿಂದ ಅಮೆರಿಕದ ಕಂಪನಿಗಳಿಗೆ ತೀವ್ರ ನಷ್ಟವಾಗುತ್ತಿದೆ ಎಂಬುದು ಟ್ರಂಪ್ ಆಡಳಿತದ ವಾದವಾಗಿದೆ. ವಿಶೇಷವಾಗಿ ಸರ್ಕಾರಿ ಸಬ್ಸಿಡಿಗಳು ಮತ್ತು ಕೈಗಾರಿಕಾ ನೀತಿಗಳ ಮೂಲಕ ಚೀನಾ ಉಕ್ಕು, ಅಲ್ಯೂಮಿನಿಯಂ, ಎಲೆಕ್ಟ್ರಿಕ್ ಕಾರುಗಳು ಹಾಗೂ ಸೋಲಾರ್ ಉತ್ಪನ್ನಗಳನ್ನು ಅಗತ್ಯಕ್ಕಿಂತ ಹೆಚ್ಚು ಉತ್ಪಾದಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಆದರೆ, ಚೀನಾ ಈ ಆರೋಪಗಳನ್ನು ತಳ್ಳಿಹಾಕಿದೆ.

ಯಾವ ದೇಶಕ್ಕೆ ಎಷ್ಟು ಸುಂಕ?

ಹೊಸ ಪ್ರಸ್ತಾವನೆಯಡಿ ಒಟ್ಟು 14 ರಾಷ್ಟ್ರಗಳನ್ನು ಗುರಿಯಾಗಿಸಲಾಗಿದ್ದು, ಆಯಾ ದೇಶಗಳಿಗೆ ತಕ್ಕಂತೆ ಸುಂಕದ ದರವನ್ನು ನಿಗದಿಪಡಿಸಲಾಗಿದೆ. ಇದರ ಪ್ರಕಾರ, ಚೀನಾ ಮೇಲೆ ಅತಿ ಹೆಚ್ಚು ಅಂದರೆ ಶೇ. 40ರವರೆಗೆ ಹಾಗೂ ವಿಯೆಟ್ನಾಂ ಮೇಲೆ ಶೇ. 35ರವರೆಗೆ ಸುಂಕ ವಿಧಿಸಲು ಶಿಫಾರಸು ಮಾಡಲಾಗಿದೆ. ಇನ್ನು ಭಾರತ, ಕಾಂಬೋಡಿಯಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಮಲೇಷ್ಯಾ, ತೈವಾನ್ ಮತ್ತು ಥೈಲ್ಯಾಂಡ್ ಸರಕುಗಳ ಮೇಲೆ ಗರಿಷ್ಠ ಶೇ. 25ರವರೆಗೆ, ಹಾಗೆಯೇ ಐರೋಪ್ಯ ಒಕ್ಕೂಟ, ಜಪಾನ್, ಸ್ವಿಟ್ಜರ್‌ಲ್ಯಾಂಡ್, ಸಿಂಗಾಪುರ ಮತ್ತು ಬಾಂಗ್ಲಾದೇಶದ ವಸ್ತುಗಳ ಮೇಲೆ ಶೇ. 20ರವರೆಗೆ ಹೊಸ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದೆ.

ಭಾರತದ ಮೇಲೇನು ಪರಿಣಾಮ?

ಈ ಹೊಸ ಸುಂಕಗಳು ತಕ್ಷಣವೇ ಜಾರಿಗೆ ಬರುವುದಿಲ್ಲ. ಯುಎಸ್‌ಟಿಆರ್ ಈ ಕುರಿತು ಸಾರ್ವಜನಿಕ ಅಧಿಸೂಚನೆ ಹೊರಡಿಸಿ, ಅಭಿಪ್ರಾಯ ಸಂಗ್ರಹಣೆ ಮತ್ತು ವಿಚಾರಣೆ ನಡೆಸಲಿದೆ. ಈ ಸಂಪೂರ್ಣ ಪ್ರಕ್ರಿಯೆ 2027ರ ಜನವರಿಯವರೆಗೆ ನಡೆಯುವ ಸಾಧ್ಯತೆಯಿದೆ.

ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ, ಸುಂಕ ಮತ್ತು ಮಾರುಕಟ್ಟೆ ಪ್ರವೇಶ ಕುರಿತ ಮಾತುಕತೆಗಳು ನಡೆಯುತ್ತಿರುವಾಗಲೇ ಈ ಬೆಳವಣಿಗೆ ಸಂಭವಿಸಿದೆ. ಭಾರತ ಇನ್ನೂ ಅಮೆರಿಕದೊಂದಿಗೆ ಅಂತಿಮ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದ ಕಾರಣ, ಡಿಸೆಂಬರ್‌ನಲ್ಲಿ ಮಿಯಾಮಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ವೇಳೆಗೆ ಈ ಒಪ್ಪಂದಗಳನ್ನು ತ್ವರಿತಗೊಳಿಸಲು ಅಮೆರಿಕ ಈ ಸುಂಕದ ಅಸ್ತ್ರವನ್ನು ಬಳಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Must Read

Skip to toolbar