July 9, 2026
Thursday, July 9, 2026
spot_img

ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ದ್ವಿಪೌರತ್ವ ರಹಸ್ಯ ಬಯಲಾಗುವ ಭೀತಿ: ಕಾರಜೋಳ ಗಂಭೀರ ಆರೋಪ

ಹೊಸದಿಗಂತ ವಿಜಯಪುರ:

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದರ ಹಿಂದೆ ಆಡಳಿತ ಪಕ್ಷದ ಶಾಸಕರ ತೀವ್ರ ಲಾಬಿ ಕಾರಣ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಸುಮಾರು 60 ರಿಂದ 65 ಶಾಸಕರು ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದು, ಇದರಿಂದ ಸರ್ಕಾರಕ್ಕೆ ಆಪತ್ತು ಬರಬಹುದು ಎಂಬ ಭಯದಿಂದ ಆಷಾಢ ಹಾಗೂ ಅಧಿಕ ಮಾಸದ ನೆಪ ಒಡ್ಡಿ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ ಎಂದು ಅವರು ಟೀಕಿಸಿದರು.

ಬರ ನಿರ್ವಹಣೆಗೆ ಕಾರಜೋಳ ಆಗ್ರಹ

ರಾಜ್ಯದಲ್ಲಿ ತಕ್ಷಣವೇ ಬರಗಾಲ ಘೋಷಿಸಿ, ಜವಾಬ್ದಾರಿಯುತವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದರು. ಗೋಶಾಲೆಗಳ ಆರಂಭ, ನಿರುದ್ಯೋಗಿಗಳಿಗೆ ಕೆಲಸ ಒದಗಿಸುವುದು ಹಾಗೂ ಲಿಫ್ಟ್ ಇರಿಗೇಶನ್ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಅಲ್ಲದೆ, ಫಸಲ್ ಬೀಮಾ ಯೋಜನೆಯಡಿ ರೈತರ ವಿಮಾ ಕಂತನ್ನು ಸರ್ಕಾರವೇ ಭರಿಸಿ ನೆರವಾಗಬೇಕು ಎಂದರು.

ರಾಹುಲ್ ಗಾಂಧಿ ಪೌರತ್ವ ವಿವಾದದ ಟೀಕೆ

ಕಾಂಗ್ರೆಸ್ ಪ್ರತಿಭಟನೆಗಳ ಹಿಂದೆ ಬಡವರ ಹಿತಾಸಕ್ತಿಯಿಲ್ಲ, ಬದಲಿಗೆ ರಾಹುಲ್ ಗಾಂಧಿ ಅವರ ದ್ವಿಪೌರತ್ವದ ರಹಸ್ಯ ಬಯಲಾಗುವ ಭೀತಿಯಿದೆ ಎಂದು ಕಾರಜೋಳ ಗಂಭೀರ ಆರೋಪ ಮಾಡಿದರು. ರಾಹುಲ್ ಬ್ರಿಟಿಷ್ ಪೌರತ್ವ ಹೊಂದಿದ್ದು, ನಾಮಪತ್ರ ಸಲ್ಲಿಕೆ ವೇಳೆ ಇದನ್ನು ಮುಚ್ಚಿಟ್ಟಿದ್ದಾರೆ. ಈ ಸತ್ಯ ಹೊರಬಂದರೆ ಅವರ ಸಂಸತ್ ಸದಸ್ಯತ್ವಕ್ಕೆ ಕುತ್ತು ಬರಲಿದೆ ಎಂದು ಕಾಂಗ್ರೆಸ್ ನಾಯಕರು ಆತಂಕಗೊಂಡಿದ್ದಾರೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಕರೆ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಡವರು ಹಾಗೂ ಅಲ್ಪಸಂಖ್ಯಾತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ ಅವರು, ಅನಕ್ಷರಸ್ಥರು ಬಿಎಲ್‌ಒಗಳ ಸಹಾಯ ಪಡೆಯಬೇಕು ಎಂದರು. ಮತದಾರರ ಪಟ್ಟಿಗೆ ಹೆಸರು ಸೇರಿಸದಿದ್ದರೆ ಸೌಲಭ್ಯ ಸಿಗುವುದಿಲ್ಲ ಎಂಬ ಡಿಕೆಶಿ ಹೇಳಿಕೆಯನ್ನು ನೆನಪಿಸಿದ ಕಾರಜೋಳ, ನಾಗರಿಕರು ಜಾಗೃತರಾಗದಿದ್ದರೆ ಮುಂದಿನ 20 ವರ್ಷ ಮತದಾನದ ಹಕ್ಕಿನಿಂದ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !