ಹೊಸದಿಗಂತ ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರಣಿ ದ್ವಿಚಕ್ರ ವಾಹನಗಳ ಕಳ್ಳತನ ನಡೆಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಕುಖ್ಯಾತ ಆರೋಪಿಯನ್ನು ಅಂಕೋಲಾ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಶಿರಸಿಯ ಅರೆಕೊಪ್ಪ ನಿವಾಸಿಯಾದ ಖಾಲೀದ್ ಷರೀಫ್ ಸಾಬ್ ಕನವಳ್ಳಿ ಬಂಧಿತ ಆರೋಪಿ. ಜೂನ್ 26 ರಂದು ಅಂಕೋಲಾ ಬಸ್ ನಿಲ್ದಾಣದಿಂದ ಫೈರೋಜ ಸತ್ತಾರ್ ಖಾನ್ ಎಂಬುವವರ ಎಕ್ಟಿವಾ ಸ್ಕೂಟರ್ ಕಳುವಾಗಿತ್ತು. ಈ ಬಗ್ಗೆ ದಾಖಲಾದ ದೂರಿನ ಬೆನ್ನಟ್ಟಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
10 ಬೈಕ್ ಕಳ್ಳತನದ ಸುರುಳಿ ಬಿಚ್ಚಿದ ವಿಚಾರಣೆ
ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಜಿಲ್ಲೆಯಾದ್ಯಂತ ಆತ ನಡೆಸಿದ್ದ ಬೈಕ್ ಕಳ್ಳತನದ ಸರಣಿ ಅಪರಾಧಗಳು ಬೆಳಕಿಗೆ ಬಂದಿವೆ. ಶಿರಸಿ ಗ್ರಾಮೀಣ ಹಾಗೂ ಶಿರಸಿ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ತಲಾ 3, ಬನವಾಸಿ, ಯಲ್ಲಾಪುರ, ಕಾರವಾರ, ಕುಮಟಾ ಮತ್ತು ತಡಸ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ತಲಾ ಒಂದು ಬೈಕ್ ಸೇರಿದಂತೆ ಒಟ್ಟು 10 ವಾಹನಗಳನ್ನು ಕದ್ದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಕಳುವಾಗಿದ್ದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ತಂಡದ ಭರ್ಜರಿ ಬೇಟೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಗಿರೀಶ ಎಸ್.ವಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ನೇತೃತ್ವದ ತಂಡದಲ್ಲಿದ್ದ ಉಪನಿರೀಕ್ಷಕರಾದ ವಿಶ್ವನಾಥ ನಿಂಗೊಳ್ಳಿ, ಲಲಿತಾ ರಜಪೂತ್ ಹಾಗೂ ಇತರೆ ಸಿಬ್ಬಂದಿಗಳು ಚಾಣಾಕ್ಷತನದಿಂದ ಕಳ್ಳನನ್ನು ಸೆರೆಹಿಡಿದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.



