July 9, 2026
Thursday, July 9, 2026
spot_img

3 ಗಂಟೆಗೂ ಅಧಿಕ ರನ್‌ಟೈಮ್: ದಳಪತಿ ಕೊನೆಯ ಸಿನಿಮಾಗೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಕೊನೆಗೂ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಈ ವರ್ಷದ ಪೊಂಗಲ್ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಆದರೆ ಈಗ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಚಿತ್ರಕ್ಕೆ ‘A’ ಪ್ರಮಾಣಪತ್ರವನ್ನು ನೀಡಿದ್ದು, ಜುಲೈನಲ್ಲಿ ಸಿನಿಮಾ ತೆರೆಕಾಣುವುದು ಖಚಿತವಾಗಿದೆ.

ಸಿನಿಮಾದ ರನ್‌ಟೈಮ್ ಎಷ್ಟು?

CBFC ಅಧಿಕೃತ ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ, ‘ಜನ ನಾಯಗನ್’ ಚಿತ್ರದ ಒಟ್ಟು ರನ್‌ಟೈಮ್ 183 ನಿಮಿಷಗಳು (3 ಗಂಟೆ 3 ನಿಮಿಷಗಳು) ಇರಲಿದೆ. ಚಿತ್ರದಲ್ಲಿ ಭರ್ಜರಿ ಆಕ್ಷನ್ ಹಾಗೂ ರಾಜಕೀಯ ಕಥಾಹಂದರ ಇರಲಿದ್ದು, ಮಂಡಳಿಯು ಕಟ್ ಮಾಡಿರುವ ದೃಶ್ಯಗಳ ಪಟ್ಟಿಯನ್ನು ಇನ್ನು ಅಧಿಕೃತವಾಗಿ ಅಪ್‌ಲೋಡ್ ಮಾಡಿಲ್ಲ.

ವಿಳಂಬಕ್ಕೆ ಕಾರಣವೇನು?

KVN ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ 2025ರ ಡಿಸೆಂಬರ್‌ನಲ್ಲೇ ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಆರಂಭದಲ್ಲಿ ಚಿತ್ರಕ್ಕೆ ‘U/A 16+’ ಸಿಗುವ ಸಾಧ್ಯತೆಯಿತ್ತು. ಆದರೆ ಪರಿಶೀಲನಾ ಸಮಿತಿಯ ಸದಸ್ಯರ ಆಕ್ಷೇಪಣೆಯಿಂದಾಗಿ ಸಿನಿಮಾ ಪರಿಷ್ಕರಣಾ ಸಮಿತಿಗೆ ವರ್ಗಾವಣೆಯಾಯಿತು. ಈ ಕಾನೂನು ಪ್ರಕ್ರಿಯೆಗಳಿಂದಾಗಿ ಚಿತ್ರದ ರಿಲೀಸ್ ತಿಂಗಳುಗಟ್ಟಲೆ ತಡವಾಗಿ, ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಮೂಡಿಸಿತ್ತು.

ಸಿಎಂ ಆದ ಬಳಿಕ ವಿಜಯ್ ಸಿನಿಮಾ ಧಮಾಕಾ

ವಿಶೇಷವೆಂದರೆ, ಸಿನಿಮಾ ವಿಳಂಬವಾಗುತ್ತಿರುವಾಗಲೇ ನಟ ವಿಜಯ್ ತಮ್ಮ ರಾಜಕೀಯ ಪಕ್ಷವಾದ ‘ತಮಿಳಗ ವೆಟ್ರಿ ಕಳಗಂ’ (TVK) ಮೂಲಕ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ್ದಾರೆ. ಭರ್ಜರಿ ಗೆಲುವು ದಾಖಲಿಸಿ ಮೈತ್ರಿ ಸರ್ಕಾರ ರಚಿಸಿರುವ ವಿಜಯ್ ಸದ್ಯ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ (CM). ಸಿಎಂ ಆದ ಬಳಿಕ ತೆರೆಕಾಣುತ್ತಿರುವ ಅವರ ಈ ಕೊನೆಯ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !