ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ಅತ್ಯಂತ ಪ್ರಮುಖ ಮತ್ತು ಆಯಕಟ್ಟಿನ ಕೈಗಾರಿಕೆಗಳನ್ನು ಚೀನಾ ದೇಶವು ವಶಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಮೋದಿ ಸರ್ಕಾರ ದೇಶದ ಹಿತಾಸಕ್ತಿಗಳಿಗೆ ದೊಡ್ಡ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗಲ್ವಾನ್ ಘಟನೆ ನೆನೆದ ಖರ್ಗೆ
ಭಾರತದ ಪ್ರಮುಖ ಕೈಗಾರಿಕೆಗಳು ಇನ್ನೂ ಚೀನಾದ ಶಕ್ತಿಯಿಂದಲೇ ನಿಯಂತ್ರಿಸಲ್ಪಡುತ್ತಿವೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಖರ್ಗೆ, ಆರು ವರ್ಷಗಳ ಹಿಂದೆ ಗಲ್ವಾನ್ ಕಣಿವೆಯಲ್ಲಿ ನಮ್ಮ 20 ಮಂದಿ ಸೈನಿಕರು ವೀರ ಮರಣ ಅಪ್ಪಿದ ನಂತರ, ಪ್ರಧಾನಿ ಮೋದಿ ಅವರು ಚೀನಾಕ್ಕೆ ‘ಕ್ಲೀನ್ ಚೀಟ್’ ನೀಡಿದ್ದರು ಎಂದು ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ನಮ್ಮ ದೇಶದ ವೀರರು ಹುತಾತ್ಮರಾಗಲು ಸಿದ್ಧರಿದ್ದರು, ಆದರೆ ಮೋದಿ ಸರ್ಕಾರ ಭಾರತದ ಹಿತಾಸಕ್ತಿಗಳನ್ನು ಚೀನಾಕ್ಕೆ ಸರೆಂಡರ್ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಭವಿಷ್ಯವನ್ನು ನಿರ್ಧರಿಸಬೇಕಾದ ಆರ್ಥಿಕತೆಯ ಪ್ರಮುಖ ವಲಯಗಳು ಈಗ ಚೀನಾದ ಮೇಲೆಯೇ ಅವಲಂಬಿತವಾಗಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಗಡಿ ಅತಿಕ್ರಮಣದ ಆರೋಪ
“ಮೋದಿ ಸರ್ಕಾರವು ಈಗ ತನ್ನ ‘ಜೂಲಾ ಫ್ರೆಂಡ್’ಗಾಗಿ ಕೆಂಪು ಹಾಸು ಹಾಸಿದೆ. ಸರ್ಕಾರದ ವಿದ್ಯುತ್ ಯೋಜನೆಗಳ ಬಿಡ್‌ನಲ್ಲಿ ಭಾಗವಹಿಸಲು ನಾಲ್ಕು ಚೀನಾ ಕಂಪನಿಗಳಿಗೆ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಅರುಣಾಚಲ ಪ್ರದೇಶ ಮತ್ತು ಲಡಾಖ್ ಗಡಿ ಭಾಗಗಳಲ್ಲಿ ಚೀನಾ ಇನ್ನೂ ಭಾರತದ ಭೂಪ್ರದೇಶವನ್ನು ಅತಿಕ್ರಮಣ ಮಾಡುತ್ತಲೇ ಇದೆ ಎಂದು ನಾಗರಿಕ ಸಂಘಟನೆಗಳ ವರದಿಗಳು ಹೇಳುತ್ತಿವೆ” ಎಂದು ಖರ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ:
“ಗಲ್ವಾನ್ ಘಟನೆಯ ನಂತರವೂ ಚೀನಾ ದೇಶವು ಭಾರತದ ಪ್ರಮುಖ ಉದ್ಯಮಗಳನ್ನು ವಶಪಡಿಸಿಕೊಳ್ಳಲು ಬಿಡುವ ಮೂಲಕ ಮೋದಿ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತಂದಿದೆ. ಪ್ರಧಾನಿಯವರ ‘ಲಾಲ್ ಆಂಖ್’ (ಕೆಂಪು ಕಣ್ಣು) ಮಸೂರದ ಅಡಿಯಲ್ಲಿ ಚೀನಿಯರು ಮತ್ತಷ್ಟು ಬೆಳೆಯಲು ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ” ಎಂದು ಖರ್ಗೆ ಲೇವಡಿ ಮಾಡಿದ್ದಾರೆ.



