ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ನಡೆದ ಸಭೆಯು ರಾಜ್ಯ ರಾಜಕಾರಣದಲ್ಲಿ ಭಾರಿ ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ನಡೆದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಕುರಿತ ಪ್ರಮುಖ ಸಭೆಯಲ್ಲಿ ಭಾಗವಹಿಸಲು ಹಿರಿಯ ನಾಯಕ ಶರದ್ ಪವಾರ್ ಬುಧವಾರ ವಿಧಾನ ಭವನಕ್ಕೆ ಭೇಟಿ ನೀಡಿದ್ದರು. ಆದರೆ, ಸಭೆಯ ನಂತರ ಶರದ್ ಪವಾರ್ ವಿಧಾನಸಭೆಯಲ್ಲಿರುವ ಶಿಂಧೆ ಕಚೇರಿಯಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಶಿಂಧೆ ಕಚೇರಿಯಲ್ಲೇ ಎನ್‌ಸಿಪಿ ಸಭೆ!
ಕ್ಯಾಬಿನೆಟ್ ಸಭೆಯಲ್ಲಿದ್ದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಶರದ್ ಪವಾರ್ ತಮ್ಮ ಕಚೇರಿಯಲ್ಲಿ ಕಾಯುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಅವರು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಧಾವಿಸಿ ಬಂದರು. ಪವಾರ್‌ಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದ ಶಿಂಧೆ, ಅವರೊಂದಿಗೆ 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಆದರೆ, ಕೌತುಕದ ವಿಷಯ ಏನೆಂದರೆ, ಶಿಂಧೆ ಹೋದ ನಂತರವೂ ಶರದ್ ಪವಾರ್ ಅದೇ ಕಚೇರಿಯಲ್ಲಿ ಉಳಿದುಕೊಂಡರು. ಅಲ್ಲದೆ, ಉಪಮುಖ್ಯಮಂತ್ರಿಗಳ ಕಚೇರಿಯಲ್ಲೇ ತಮ್ಮ ಪಕ್ಷದ ಶಾಸಕರ ತುರ್ತು ಸಭೆಯನ್ನು ನಡೆಸಿದರು. ಶಿಂಧೆ ಕಚೇರಿಯು ಇದನ್ನು ಕೇವಲ “ಸೌಜನ್ಯದ ಭೇಟಿ” ಎಂದು ಕರೆದಿದ್ದರೂ, ಇದರ ಸಮಯ ಮಾತ್ರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಹೆಚ್ಚಿದ ರಾಜಕೀಯ ವದಂತಿಗಳು
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಆರು ಸಂಸದರು ಶಿಂಧೆ ಬಣಕ್ಕೆ ಸೇರಿದ ಬೆನ್ನಲ್ಲೇ ಈ ಭೇಟಿ ನಡೆದಿರುವುದರಿಂದ ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟದಲ್ಲಿ ಆತಂಕ ಶುರುವಾಗಿದೆ. ಇದರೊಂದಿಗೆ, ಶರದ್ ಪವಾರ್ ಪಕ್ಷದ ಒಂದು ಬಣವು ಆಡಳಿತಾರೂಢ ಎನ್‌ಡಿಎ (NDA) ಮೈತ್ರಿಕೂಟದ ಜೊತೆ ಕೈಜೋಡಿಸಲು ಆಸಕ್ತಿ ಹೊಂದಿದೆ ಎಂಬ ವದಂತಿಗಳಿಗೂ ಈ ಭೇಟಿ ಪುಷ್ಟಿ ನೀಡಿದೆ.
“ದ್ರೋಹಿಯ ಕಚೇರಿಯಲ್ಲಿ ಸಭೆನಾ?” ಸಂಜಯ್ ರಾವತ್ ಕಿಡಿ
ಈ ಭೇಟಿಯ ಕುರಿತು ಮೈತ್ರಿ ಪಕ್ಷವಾದ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಶಿಂಧೆ ಕಚೇರಿಗೆ ಹೋಗಿ ಭೇಟಿಯಾಗುವ ಅಗತ್ಯ ಏನಿತ್ತು? ಈ ನಡೆ ಎನ್‌ಸಿಪಿ ಪಕ್ಷದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ” ಎಂದು ರಾವತ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:
ಶಿಂಧೆಯನ್ನು “ದ್ರೋಹಿ” ಎಂದು ಕರೆದ ರಾವತ್, “ಶರದ್ ಪವಾರ್ ದೇಶದ ಅತ್ಯಂತ ಗೌರವಾನ್ವಿತ ನಾಯಕರು. ಆದರೆ ನಮ್ಮ ಸರ್ಕಾರವನ್ನು ಉರುಳಿಸಿದ ದ್ರೋಹಿಯ ಕಚೇರಿಯಲ್ಲೇ ತಮ್ಮ ಪಕ್ಷದ ಸಭೆ ನಡೆಸಿರುವುದು ಅವರ ರಾಜಕೀಯ ವರ್ಚಸ್ಸನ್ನು ಕುಗ್ಗಿಸುತ್ತದೆ . ಇಡೀ ವಿಧಾನ ಭವನವೇ ಖಾಲಿ ಇರುವಾಗ ಪವಾರ್ ಸಾಹೇಬರು ಸಭೆ ನಡೆಸಲು ಶಿಂಧೆ ಚೇಂಬರನ್ನೇ ಏಕೆ ಆರಿಸಿಕೊಂಡರು?” ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.



