ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ತಂಡದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿನ ದೊಡ್ಡ ದೌರ್ಬಲ್ಯವೊಂದು ಬಹಿರಂಗವಾಗಿದ್ದು, ಮುಂಬರುವ ಪಂದ್ಯಗಳಲ್ಲಿ ಎದುರಾಳಿ ಬೌಲರ್‌ಗಳು ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿದ್ದಾರೆ ಎಂದು ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್ ಎಚ್ಚರಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ 15 ವರ್ಷದ ಯುವ ಆಟಗಾರ ವೈಭವ್, ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 14 ಮತ್ತು 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ್ದ ವೈಭವ್‌ಗೆ, ಇಂಗ್ಲೆಂಡ್ ಬೌಲರ್‌ಗಳು ಶಾರ್ಟ್ ಪಿಚ್ ಎಸೆತಗಳ ಮೂಲಕ ನಿರಂತರವಾಗಿ ಕಾಡುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಶಾರ್ಟ್ ಬಾಲ್ ಎದುರಿಸಲು ಪರದಾಟ
ಈ ಬಗ್ಗೆ ಮಾತನಾಡಿದ ಪಾರ್ಥಿವ್ ಪಟೇಲ್, ವೈಭವ್ ಸೂರ್ಯವಂಶಿ ವಿರುದ್ಧ ಬೌಲರ್‌ಗಳು ಮುಂಚಿತವಾಗಿಯೇ ಯೋಜನೆ ರೂಪಿಸಿಕೊಂಡು ಬರುತ್ತಿದ್ದಾರೆ ಎಂದಿದ್ದಾರೆ. “ಜೋಫ್ರಾ ಆರ್ಚರ್ ಮಾತ್ರವಲ್ಲ, ಐಪಿಎಲ್ ನೋಡಿದ ಯಾವುದೇ ಬೌಲರ್‌ಗಾದರೂ ವೈಭವ್‌ಗೆ ಶಾರ್ಟ್ ಬಾಲ್ ಎಸೆಯುವ ಕಟ್ಟುನಿಟ್ಟಿನ ಯೋಜನೆ ಇರುವುದು ಆಶ್ಚರ್ಯ ತರಲ್ಲ. ಅವರು ಔಟ್ ಆದ ಎಸೆತ ಮಾತ್ರವಲ್ಲ, ಅದಕ್ಕೂ ಹಿಂದಿನ ಎಸೆತ ಕೂಡ ಶಾರ್ಟ್ ಬಾಲ್ ಆಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಇಂತಹ ಬೌಲಿಂಗ್ ದಾಳಿಯನ್ನು ನಿರಂತರವಾಗಿ ಎದುರಿಸಬೇಕಾಗುತ್ತದೆ” ಎಂದು ಪಟೇಲ್ ತಿಳಿಸಿದ್ದಾರೆ.
ಇರ್ಫಾನ್ ಪಠಾಣ್ ನೀಡಿದ ಪ್ರಮುಖ ಸಲಹೆ
ಇದಕ್ಕೂ ಮುನ್ನ ಮಾತನಾಡಿದ್ದ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ ವೈಭವ್‌ಗೆ ಎಚ್ಚರಿಕೆ ನೀಡಿದ್ದರು. ವೈಭವ್ ಅವರಲ್ಲಿ ಅದ್ಭುತ ಪ್ರತಿಭೆ ಇದೆ, ಆದರೆ ಎದುರಾಳಿಗಳ ತಂತ್ರಗಳಿಗೆ ತಕ್ಕಂತೆ ಅವರು ತಮ್ಮ ಆಟವನ್ನು ಬದಲಿಸಿಕೊಳ್ಳಬೇಕು ಎಂದು ಪಠಾಣ್ ಹೇಳಿದ್ದಾರೆ. ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳ ವಿರುದ್ಧ ಮುನ್ನುಗ್ಗಿ ಹೊಡೆಯುವಾಗ ದೇಹದ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
ಐಪಿಎಲ್ 2026 ರ ‘ಪ್ಲೇಯರ್ ಆಫ್ ದಿ ಸೀಸನ್’ ಪ್ರಶಸ್ತಿ ಪಡೆದಿರುವ ವೈಭವ್, ಜಾಗತಿಕ ಕ್ರಿಕೆಟ್‌ನಲ್ಲಿ ಭಾರಿ ಭರವಸೆ ಮೂಡಿಸಿದ್ದಾರೆ. ಆದರೆ, ಬೌಲರ್‌ಗಳು ಈಗ ಅವರ ಶಾರ್ಟ್ ಬಾಲ್ ದೌರ್ಬಲ್ಯವನ್ನು ಗುರುತಿಸಿರುವುದರಿಂದ, ಮುಂಬರುವ ಪಂದ್ಯಗಳಲ್ಲಿ ಯುವ ಬ್ಯಾಟರ್ ಇದಕ್ಕೆ ಹೇಗೆ ತಿರುಗೇಟು ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ



