ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಂಬಲ್ಡನ್ ಟೆನಿಸ್ ಅಂಗಳದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸರ್ಬಿಯಾದ ದೈತ್ಯ ಆಟಗಾರ ನೊವಾಕ್ ಜೊಕೊವಿಚ್, ಭಾರತದ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜೊಕೊವಿಕ್ ಅವರು ಕೊಹ್ಲಿಯನ್ನು ‘ಗ್ಲೋಬಲ್ ಸ್ಟಾರ್’ ಎಂದು ಕರೆದಿದ್ದು, ಭಾರತದಲ್ಲಿ ಅವರ ಜನಪ್ರಿಯತೆಗೆ ಯಾರೂ ಸಾಟಿಯಿಲ್ಲ ಎಂದಿದ್ದಾರೆ. ಕಳೆದ 15 ವರ್ಷಗಳಿಂದ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಅವರು, ತಮ್ಮ ಬ್ಯಾಟ್ ಸ್ವಿಂಗ್ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ವಿರಾಟ್ ಕೊಹ್ಲಿ ಅವರ ಸಹಾಯವನ್ನು ಕೋರಿದ್ದಾರೆ. ಈ ಮೂಲಕ ಕೋಟ್ಯಂತರ ಭಾರತೀಯ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.
ಕೊಹ್ಲಿ ಭಾವನಾತ್ಮಕ ಪ್ರತಿಕ್ರಿಯೆ
ಜೊಕೊವಿಕ್ ಅವರ ಹೇಳಿಕೆಯನ್ನು ವಿಂಬಲ್ಡನ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ, ವಿರಾಟ್ ಕೊಹ್ಲಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. “ನಾನು ಮತ್ತು ಜೋಕೋವಿಚ್ ಕಳೆದ ಕೆಲವು ಸಮಯದಿಂದ ಸಂದೇಶಗಳ ಮೂಲಕ ಸಂಪರ್ಕದಲ್ಲಿದ್ದೇವೆ. ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರರೊಬ್ಬರು ನನ್ನೊಂದಿಗೆ ಸಂವಾದ ನಡೆಸುವುದು ನನ್ನ ಸೌಭಾಗ್ಯ” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
ದಾಖಲೆಯ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಜಯ
ಇನ್ನೊಂದೆಡೆ, ಪ್ರಸಕ್ತ ಸಾಲಿನ ವಿಂಬಲ್ಡನ್ ಟೂರ್ನಿಯಲ್ಲಿ ಜೊಕೊವಿಕ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕೆನಡಾದ ಫೆಲಿಕ್ಸ್ ಆಗರ್-ಅಲಿಯಾಸಿಮ್ ವಿರುದ್ಧ ನಡೆದ ಅತ್ಯಂತ ರೋಮಾಂಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೊವಿಕ್ 7-6 (12), 3-6, 6-3, 6-7 (4), 7-6 (10) ಸೆಟ್‌ಗಳ ರೋಚಕ ಜಯ ಸಾಧಿಸಿದರು. 5 ಗಂಟೆ 15 ನಿಮಿಷಗಳ ಕಾಲ ನಡೆದ ಈ ಮ್ಯಾರಥಾನ್ ಮುಖಾಮುಖಿಯು ವಿಂಬಲ್ಡನ್ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಯ ಕ್ವಾರ್ಟರ್ ಫೈನಲ್ ಪಂದ್ಯ ಎಂಬ ಐತಿಹಾಸಿಕ ದಾಖಲೆ ಬರೆಯಿತು.



