July 10, 2026
Friday, July 10, 2026
spot_img

ಮತ್ತೆ ಕೈಕೊಟ್ಟ ನಮ್ಮ ಮೆಟ್ರೋ, 20 ದಿನಗಳಲ್ಲಿ 3ನೇ ಬಾರಿಗೆ ತಾಂತ್ರಿಕ ದೋಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಮಯಕ್ಕೆ ಸರಿಯಾಗಿ ಸ್ಥಳವನ್ನು ತಲುಪಲು ಜನ ನಮ್ಮ ಮೆಟ್ರೋವನ್ನು ನಂಬುತ್ತಾರೆ. ಆದರೆ ಇದೀಗ ಕಳೆದ 20 ದಿನಗಳಲ್ಲೇ ಮೂರನೇ ಬಾರಿ ಮೆಟ್ರೋದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಬೆಳಗ್ಗೆ ಕೆಲಸ, ಕಚೇರಿ, ಸ್ಕೂಲ್‌, ಕಾಲೇಜುಗಳಿಗೆ ಹೋಗುವ ಪೀಕ್‌ ಅವರ್‌ನಲ್ಲಿ ಗ್ರೀನ್‌ಲೈನ್‌ನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದ ನೂರಾರು ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ಬೆಳಗ್ಗೆ 8.23ರ ಸುಮಾರಿಗೆ ಬನಶಂಕರಿ ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ರೈಲಿನಲ್ಲಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ರೈಲು ಮುಂದೆ ಚಲಿಸಲು ಸಾಧ್ಯವಾಗಲಿಲ್ಲ. ಇದರಿಂದ ಗ್ರೀನ್ ಲೈನ್‌ನ ಸಂಪೂರ್ಣ ಮಾರ್ಗದಲ್ಲಿ ರೈಲು ಸಂಚಾರ ವಿಳಂಬವಾಯಿತು.

ತಕ್ಷಣವೇ ರೈಲಿನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಇತರ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಬಳಿಕ ದೋಷ ಪತ್ತೆಹಚ್ಚಲು ಸಂಬಂಧಿತ ರೈಲನ್ನು ಹಳಿಯಿಂದ ತೆರವುಗೊಳಿಸಿ ಪರಿಶೀಲನೆ ನಡೆಸಲಾಯಿತು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ತಾಂತ್ರಿಕ ದೋಷದಿಂದಾಗಿ ಬೆಳಗ್ಗೆ 8.23ರಿಂದ 8.38ರವರೆಗೆ ಗ್ರೀನ್ ಲೈನ್ ಸೇವೆಗೆ ನೇರ ಪರಿಣಾಮ ಬೀರಿತು. ಸುರಕ್ಷತಾ ದೃಷ್ಟಿಯಿಂದ ರೈಲುಗಳನ್ನು ನಿಗದಿತ ವೇಗಕ್ಕಿಂತ ಕಡಿಮೆ ವೇಗದಲ್ಲಿ ಓಡಿಸಲಾಯಿತು. ಇದರಿಂದ ಬೆಳಗ್ಗೆ 10.30ರವರೆಗೆ ರೈಲು ಸಂಚಾರದಲ್ಲಿ ವಿಳಂಬ ಉಂಟಾಯಿತು. ನಂತರ ವೇಳಾಪಟ್ಟಿಯಂತೆ ಮೆಟ್ರೋ ಸೇವೆ ಸಹಜ ಸ್ಥಿತಿಗೆ ಮರಳಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !