ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಬ್ರಿಟನ್ನ 23 ವರ್ಷದ ಯುವ ಆಟಗಾರ ಆರ್ಥರ್ ಫೆರಿ ಹೊಸ ಇತಿಹಾಸ ಬರೆದಿದ್ದಾರೆ. ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ನಲ್ಲಿ ವಿಶ್ವದ ನಂ. 2 ಆಟಗಾರ, ಜರ್ಮನಿಯ ಅಲೆಕ್ಸಾಂಡರ್ ಝ್ವೆರೆಫ್ ಎದುರು 7-6, 6-2, 6-4 ನೇರ ಸೆಟ್ಗಳಿಂದ ಸೋತರೂ, ಫೆರಿ ಇಡೀ ಟೆನಿಸ್ ಲೋಕದ ಗಮನ ಸೆಳೆದಿದ್ದಾರೆ. ಸೋಲಿನ ಬಳಿಕ ಇಡೀ ಕ್ರೀಡಾಂಗಣ ಎದ್ದು ನಿಂತು ಈ ಯುವ ಪ್ರತಿಭೆಗೆ ಗೌರವ ಸಲ್ಲಿಸಿತು.
ಗೋರಾನ್ ಇವಾನಿಸೆವಿಕ್ ದಾಖಲೆ ಸರಿಗಟ್ಟಿದ ಯುವಕ
ವೈಲ್ಡ್ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶಿಸಿದ್ದ ಫೆರಿ, ವಿಂಬಲ್ಡನ್ ಇತಿಹಾಸದಲ್ಲೇ ಸೆಮಿಫೈನಲ್ ತಲುಪಿದ ವಿಶ್ವದ ಎರಡನೇ ವೈಲ್ಡ್ಕಾರ್ಡ್ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2001ರಲ್ಲಿ ಗೋರಾನ್ ಇವಾನಿಸೆವಿಕ್ ಈ ಸಾಧನೆ ಮಾಡಿದ್ದರು. ಜೊತೆಗೆ, 1968ರ ಓಪನ್ ಎರಾ ಬಳಿಕ ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ ತಲುಪಿದ ಮೊದಲ ಬ್ರಿಟಿಷ್ ವೈಲ್ಡ್ಕಾರ್ಡ್ ಆಟಗಾರ ಎಂಬ ಐತಿಹಾಸಿಕ ದಾಖಲೆಯೂ ಇವರ ಪಾಲಾಗಿದೆ.
ರಾಂಕಿಂಗ್ನಲ್ಲಿ ಬೃಹತ್ ಜಿಗಿತ, ಬ್ರಿಟನ್ ನಂ.1
ಟೂರ್ನಿಗೂ ಮುನ್ನ ವಿಶ್ವ ರ್ಯಾಂಕಿಂಗ್ನಲ್ಲಿ 114ನೇ ಸ್ಥಾನದಲ್ಲಿದ್ದ ಆರ್ಥರ್ ಫೆರಿ, ತಮ್ಮ ಅಮೋಘ ಪ್ರದರ್ಶನದಿಂದ ನೇರವಾಗಿ 36ನೇ ಶ್ರೇಯಾಂಕಕ್ಕೆ ಜಿಗಿದಿದ್ದಾರೆ. ಈ ಮೂಲಕ ಅವರು ಮೊದಲ ಬಾರಿಗೆ ಬ್ರಿಟನ್ನ ನಂಬರ್ 1 ಸಿಂಗಲ್ಸ್ ಟೆನಿಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಸೋಲಿನ ನಡುವೆಯೂ ಬ್ರಿಟನ್ ಟೆನಿಸ್ಗೆ ಹೊಸ ಆಶಾಕಿರಣ ಸಿಕ್ಕಂತಾಗಿದೆ.



