ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಕ್ರಿಕೆಟ್‌ನ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಕಣಕ್ಕಿಳಿಯುವ ಮೂಲಕ ಹೊಸ ಜಾಗತಿಕ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ವೃತ್ತಿಜೀವನದ 300ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ಈ ಅಪರೂಪದ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕಿ ನ್ಯಾಟ್ ಸೀವರ್ ಬ್ರಂಟ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು.
ವಿಶ್ವದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆ
ಈ ಪಂದ್ಯದ ಮೂಲಕ ಸ್ಮೃತಿ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ 300 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವದಾಖಲೆ ನಿರ್ಮಿಸಿದರು. ಮಂಧಾನ ಕೇವಲ 29 ವರ್ಷ 357 ದಿನಗಳ ಪ್ರಾಯದಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಸುನೆ ಲೂಸ್ (30 ವರ್ಷ 163 ದಿನಗಳು) ಹೆಸರಿನಲ್ಲಿದ್ದ ದಾಖಲೆಯನ್ನು ಭಾರತದ ಆರಂಭಿಕ ಆಟಗಾರ್ತಿ ಧೂಳೀಪಟ ಮಾಡಿದ್ದಾರೆ.
ಕ್ರಿಕೆಟ್ ಕಾಶಿಯಲ್ಲಿ ಸಾರ್ವಕಾಲಿಕ ದಾಖಲೆ
ಈ ಐತಿಹಾಸಿಕ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮೃತಿ, 108 ಎಸೆತಗಳಲ್ಲಿ 83 ರನ್ ಚಚ್ಚಿದರು. ಈ ಆಕರ್ಷಕ ಅರ್ಧಶತಕದ ನೆರವಿನಿಂದ, ಕ್ರಿಕೆಟ್‌ನ ಕಾಶಿ ಎಂದೇ ಕರೆಯಲಾಗುವ ಲಾರ್ಡ್ಸ್ ಮೈದಾನದಲ್ಲಿ ಫಿಫ್ಟಿ ಬಾರಿಸಿದ ಮೊದಲ ಮಹಿಳಾ ಬ್ಯಾಟರ್ ಎಂಬ ಸಾರ್ವಕಾಲಿಕ ಇತಿಹಾಸವನ್ನು ಭಾರತದ ಈ ಹೆಮ್ಮೆಯ ಆಟಗಾರ್ತಿ ತಮ್ಮದಾಗಿಸಿಕೊಂಡಿದ್ದಾರೆ.



