ಹೊಸದಿಗಂತ ವರದಿ ಬೆಳಗಾವಿ:
ರಾಜ್ಯ ರಾಜಕಾರಣದಲ್ಲಿ ಸದ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯದ್ದೇ ತೀವ್ರ ಸದ್ದು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ, ಸದಾ ರಾಜಕೀಯದ ದಿಕ್ಸೂಚಿ ಎಂದೇ ಬಿಂಬಿತವಾಗುವ ಗಡಿ ಜಿಲ್ಲೆ ಬೆಳಗಾವಿಯ ಕಾಂಗ್ರೆಸ್ ಶಾಸಕರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಮೇಲೆ ಒತ್ತಡ ಹೇರಲು ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಬೆಳಗಾವಿ ಜಿಲ್ಲೆಗೆ ಕೇವಲ ಎರಡಲ್ಲ, ಕನಿಷ್ಠ ಮೂರು ಸಚಿವ ಸ್ಥಾನಗಳನ್ನು ನೀಡಲೇಬೇಕು ಎಂದು ಶಾಸಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಬಿಗಿಪಟ್ಟು ಮುಂದುವರಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಕಮ್ಮಿ ಬೇಡವೇ ಬೇಡ:
“ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಗೆ ಬರೋಬ್ಬರಿ ನಾಲ್ಕು ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ಹಾಗಿದ್ದಾಗ, ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲೂ ನಮಗೆ ಕನಿಷ್ಠ ಮೂರು ಸ್ಥಾನಗಳನ್ನಾದರೂ ನೀಡಲೇಬೇಕು” ಎನ್ನುವುದು ಈ ಭಾಗದ ನಾಯಕರ ಪ್ರಬಲ ವಾದವಾಗಿದೆ. ಮೇಲ್ನೋಟಕ್ಕೆ ಇದು ಕೇವಲ ಪ್ರಾತಿನಿಧ್ಯದ ಬೇಡಿಕೆಯಂತೆ ಕಂಡರೂ, ಈ ಮೂರು ಸಚಿವ ಸ್ಥಾನಗಳ ಬೇಡಿಕೆಯ ಹಿಂದೆ ಬೆಳಗಾವಿ ಕಾಂಗ್ರೆಸ್ ನಾಯಕರ ದೊಡ್ಡ ರಾಜಕೀಯ ತಂತ್ರಗಾರಿಕೆ ಅಡಗಿದೆ.
ಡಿಕೆಶಿ ಕೋಟಾದ ಲೆಕ್ಕಾಚಾರ: ಸವದಿ ವರ್ಸಸ್ ಹೆಬ್ಬಾಳ್ಕರ್:
ರಾಜಕೀಯ ಮೂಲಗಳ ಪ್ರಕಾರ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ, ಗಡಿ ಭಾಗದಲ್ಲಿ ಪಕ್ಷದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ನಾಯಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಹೈಕಮಾಂಡ್ ಮಟ್ಟದಲ್ಲಿ ಅಥವಾ ಜಾತಿ ಸಮೀಕರಣಗಳ ಕಾರಣದಿಂದಾಗಿ ಲಕ್ಷ್ಮಣ ಸವದಿ ಅವರಿಗೆ ಮಂತ್ರಿಗಿರಿ ಕೈತಪ್ಪಿದರೆ, ತಮ್ಮ ಆಪ್ತ ವಲಯದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮತ್ತೊಂದು ಅವಕಾಶ ನೀಡಲು ಡಿಕೆಶಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಲಿಂಗಾಯತ ಹಾಗೂ ಮಹಿಳಾ ಕೋಟಾದ ಅಡಿಯಲ್ಲಿ ಹೆಬ್ಬಾಳ್ಕರ್ಗೆ ಮಂತ್ರಿಗಿರಿ ಸುಲಭವಾಗಿ ಸಿಗಬಹುದು ಎಂಬ ಲೆಕ್ಕಾಚಾರ ಅವರದ್ದಾಗಿದೆ. ಅಂದರೆ, ಡಿಕೆಶಿ ಕೋಟಾದಲ್ಲಿ ಸವದಿ ಅಥವಾ ಹೆಬ್ಬಾಳ್ಕರ್ ಪೈಕಿ ಒಬ್ಬರಿಗೆ ಸ್ಥಾನ ಫಿಕ್ಸ್ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಬಣದ ಶಾಸಕರಿಂದ ಬಿರುಸಿನ ತಂತ್ರಗಾರಿಕೆ:
ಯಾವಾಗ ಜಿಲ್ಲೆಗೆ ಮೂರು ಸ್ಥಾನಗಳು ಸಿಗಬಹುದು ಎಂಬ ಚರ್ಚೆ ಶುರುವಾಯಿತೋ, ಅಲ್ಲಿಗೆ ಇನ್ನುಳಿದ ಶಾಸಕರಾದ ಅಶೋಕ ಪಟ್ಟಣ್, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ ಹಾಗೂ ಆಸೀಫ್ ಸೇಠ್ ಅವರ ಲೆಕ್ಕಾಚಾರಗಳು ಬಿರುಸುಗೊಂಡಿವೆ.
ಇದನ್ನೂ ಓದಿ:
ಈ ನಾಲ್ಕೂ ಜನ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅತ್ಯಂತ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಒಂದು ಸ್ಥಾನ ಡಿಕೆಶಿ ಕೋಟಾಗೆ ಹೋದರೂ, ಜಿಲ್ಲೆಗೆ ಒಟ್ಟು ಮೂರು ಸ್ಥಾನ ಸಿಕ್ಕರೆ ಉಳಿದ ಎರಡು ಸ್ಥಾನಗಳಲ್ಲಿ ತಮಗೂ ಅವಕಾಶ ಸಿಗಬಹುದು ಎಂಬುದು ಈ ನಾಲ್ವರ ಲೆಕ್ಕಾಚಾರವಾಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರ ಮೂಲಕವೇ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಹೇಗಾದರೂ ಮಾಡಿ ಮಂತ್ರಿ ಮಂಡಲ ಸೇರಲೇಬೇಕು ಎಂದು ಈ ನಾಯಕರು ಹೊಸ ವರಸೆ ಆರಂಭಿಸಿದ್ದಾರೆ.
ಸಿಎಂ-ಡಿಸಿಎಂ ನಿಲುವಿನತ್ತ ಎಲ್ಲರ ಚಿತ್ತ:
ಜಿಲ್ಲೆಯ ಹಿರಿಯ ಹಾಗೂ ಕಿರಿಯ ನಾಯಕರ ನಡುವಿನ ಈ ಆಂತರಿಕ ಪೈಪೋಟಿಯೇ ಈಗ ‘ಮೂರು ಸಚಿವ ಸ್ಥಾನ’ಗಳ ಬಿಗಿಪಟ್ಟಾಗಿ ಮಾರ್ಪಟ್ಟಿದೆ. ಹೈಕಮಾಂಡ್ ಮಟ್ಟದಲ್ಲಿ ಒಮ್ಮತ ಮೂಡಿಸಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬೆಳಗಾವಿ ನಾಯಕರು ನಡೆಸಿರುವ ಈ ಜಾಣ್ಮೆಯ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಯಾವ ರೀತಿ ಸ್ಪಂದಿಸಲಿದ್ದಾರೆ ಮತ್ತು ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.



