ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಕೋಟ್ಯಂತರ ಸಂಗೀತ ಪ್ರೇಮಿಗಳ ಆರಾಧ್ಯ ದೈವ ಎಸ್. ಜಾನಕಿಯವರು ಇಂದು ವಿಧಿವಶರಾಗಿದ್ದಾರೆ. ಆರು ದಶಕಗಳ ಕಾಲ ಜನರನ್ನು ತಮ್ಮ ಮಧುರ ಕಂಠದಿಂದ ರಂಜಿಸಿದ್ದ ಜಾನಕಿ ಅಮ್ಮನ ಕಡೆಯ ದಿನಗಳು ಅತ್ಯಂತ ನೋವಿನಿಂದ ಕೂಡಿದ್ದವು.
ನನ್ನ ಮಗ ನನ್ನನ್ನು ನೋಡಿಕೊಳ್ಳುತ್ತಾನೆ ಎನ್ನುವ ಭರವಸೆಯಲ್ಲಿದ್ದ ಜಾನಕಿಯವರಿಗೆ ಮಗನ ಸಾವು ಬರಸಿಡಿಲಿನಂತೆ ಬಡಿದಿತ್ತು. 88ರ ವಯಸ್ಸಿನಲ್ಲಿ ತಮ್ಮ ಒಬ್ಬನೇ ಮಗ ಮುರಳಿ ಕೃಷ್ಣ ಅವರನ್ನು ಕಳೆದುಕೊಂಡು ಕುಗ್ಗಿಹೋಗಿದ್ದರು. ಪ್ರತಿಕ್ಷಣವೂ ನೋವಿನಿಂದ ನೂಕುತ್ತಿದ್ದರು.
ಕಳೆದ ಜನವರಿಯಲ್ಲಿ ಮಗ ಮುರುಳಿ ಕೃಷ್ಣ ಹೃದಯಾಘಾತಕ್ಕೆ ಬಲಿಯಾಗಿದ್ದರು. ತಮ್ಮ ಕಣ್ಣೆದುರೇ ಮಗನನ್ನು ಕಳೆದುಕೊಂಡ ದುಃಖದಿಂದ ತಾಯಿಯ ಹೃದಯ ನಲುಗಿತ್ತು. ತೀವ್ರ ಮಾನಸಿಕ ಖಿನ್ನತೆ ಹಾಗೂ ವಯೋಸಹಜ ಕಾಯಿಲೆಗಳು ಅವರನ್ನು ಕುಗ್ಗಿಸಿತ್ತು. ಮಗ ಹೋದ ಕೆಲವೇ ತಿಂಗಳುಗಳಲ್ಲಿ ಜಾನಕಿಯವರು ಕೂಡ ಇಹಲೋಕ ತ್ಯಜಿಸಿದ್ದಾರೆ.



