ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ ಮೂಲದ ಖ್ಯಾತ ಉದ್ಯಮಿ ಪಬ್ಬಾ ಚಂದ್ರಶೇಖರ್ (51) ಮತ್ತು ಅವರ ಪತ್ನಿ ಸ್ವಪ್ನಾ (42) ಯುರೋಪಿನ ಸುಂದರ ತಾಣ ಸ್ವಿಟ್ಜರ್ಲೆಂಡ್‌ಗೆ ಪ್ರವಾಸಕ್ಕೆ ಹೋದ ಜಾಗದಲ್ಲೇ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಜೂನ್ 22 ರಂದು ರಜೆ ಕಳೆಯಲು ವಿದೇಶಕ್ಕೆ ತೆರಳಿದ್ದ ಈ ಜೋಡಿ, ಜುಲೈ 8 ರವರೆಗೆ ಭಾರತದಲ್ಲಿದ್ದ ಕುಟುಂಬದವರೊಂದಿಗೆ ಫೋನ್ ಸಂಪರ್ಕದಲ್ಲಿದ್ದರು. ಆದರೆ, ಅದಾದ ನಂತರ ಇಬ್ಬರ ಮೊಬೈಲ್ ಫೋನ್‌ಗಳು ದಿಢೀರನೆ ಸ್ವಿಚ್ ಆಫ್ ಆಗಿದ್ದು, ಇಡೀ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದೆ.
ಮಗಳ ದೂರು, ₹50 ಕೋಟಿ ಹಗರಣದ ಶಂಕೆ!
ಹೆತ್ತವರ ಸಂಪರ್ಕ ಸಿಗದೆ ಆತಂಕಗೊಂಡ 23 ವರ್ಷದ ಮಗಳು ಶ್ರೇಯಾ ತಕ್ಷಣವೇ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಕಣ್ಮರೆ ಪ್ರಕರಣದಂತೆ ಕಂಡರೂ, ಇದರ ಹಿಂದೆ ಬರೋಬ್ಬರಿ 50 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ವಂಚನೆಯ ಕರಾಳ ಜಾಲವಿರುವ ಶಂಕೆ ವ್ಯಕ್ತವಾಗಿದೆ. ಸಾಲದ ಬಾಧೆ ಅಥವಾ ಹೂಡಿಕೆದಾರರಿಗೆ ವಂಚಿಸಿ ದಂಪತಿ ತಲೆಮರೆಸಿಕೊಂಡಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ರಂಗಪ್ರವೇಶ ಮಾಡಲಿದೆಯೇ ಇಂಟರ್‌ಪೋಲ್?
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಮ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ದಂಪತಿಯ ವಲಸೆ ದಾಖಲೆಗಳು, ಫ್ಲೈಟ್ ಟಿಕೆಟ್‌ಗಳು ಹಾಗೂ ಸ್ವಿಟ್ಜರ್ಲೆಂಡ್‌ನಲ್ಲಿ ಅವರ ಮೊಬೈಲ್‌ನ ಕೊನೆಯ ಲೊಕೇಶನ್ ಪತ್ತೆಹಚ್ಚಲು ಇಂಟರ್‌ಪೋಲ್ ನೆರವು ಪಡೆಯಲು ಸಜ್ಜಾಗಿದ್ದಾರೆ.



