ಹೊಸದಿಗಂತ ವರದಿ ಮಡಿಕೇರಿ:
ಮಗುವಿನ ಅಳು ಕೇಳಿ ಸ್ಥಳೀಯರು ತೋರಿದ ಸಮಯಪ್ರಜ್ಞೆಯಿಂದಾಗಿ 8 ತಿಂಗಳ ಹಸುಗೂಸು ಸಾವಿನ ದವಡೆಯಿಂದ ಪಾರಾದ ಘಟನೆ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ನಡೆದಿದೆ.
ಈ ಬಡಾವಣೆಯಲ್ಲಿ 2018, 19ರ ಪ್ರವಾಹ ಸಂತ್ರಸ್ತರಿಗೆ ಮನೆಗಳನ್ನ ನಿರ್ಮಿಸಿ ಕೊಡಲಾಗಿದ್ದು, ಇಲ್ಲಿಯ 255ನೇ ಮನೆ ನಂಬರ್‌ನಲ್ಲಿ ತಾಯಿ ಮತ್ತು 8 ತಿಂಗಳ ಮಗು ವಾಸವಿದ್ದು, ಮಗುವಿನ ತಂದೆ ದೂರದ ಚೆನ್ನೈನಲ್ಲಿ ಕೆಲಸದಲ್ಲಿದ್ದಾರಂತೆ.
ನ. 11ರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಮನೆ ಒಳಗಿನಿಂದ ಮಗುವಿನ ಜೋರಾದ ಅಳು ಕೇಳಿಸಿದ್ದು, ಸ್ಥಳೀಯರು ಅಲ್ಲಿ ಹೋಗಿ ನೋಡಿದಾಗ ಮನೆಗೆ ಬೀಗ ಹಾಕಲಾಗಿತ್ತು. ತಾಯಿಯ ಫೋನ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿದ್ದರಿಂದ ಮಗುವಿನ ಅಜ್ಜಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಮಡಿಕೇರಿಯಿಂದ ದೌಡಾಯಿಸಿ ಬಂದ ಅಜ್ಜಿ, ಸ್ಥಳೀಯರ ಜೊತೆ ಸೇರಿ ಮನೆಯ ಬೀಗ ಒಡೆದು ನೋಡಿದಾಗ ಸೂಟ್‌ಕೇಸ್ ಒಂದರ ಒಳಗೆ ಮಗು ಜೋರಾಗಿ ಅಳುತ್ತಿರುವುದು ಗೋಚರಿಸಿದೆ. ತಕ್ಷಣವೇ ಮಗುವನ್ನು ರಕ್ಷಿಸಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರ ಪ್ರಕಾರ ಮಗುವಿನ ತಾಯಿ ಮಧ್ಯಾಹ್ನದ ಸುಮಾರಿಗೆ ಜಂಬೂರು ಬಡಾವಣೆಯ ಮನೆಯಿಂದ ಹೊರ ಹೋಗಿದ್ದಾರೆ. ಎಂಟು ತಿಂಗಳ ಹಸುಗೂಸನ್ನು ನೋಡಿಕೊಳ್ಳಲು ಅಮ್ಮನನ್ನು ಬಿಟ್ಟರೆ ಬೇರೆ ಯಾರೂ ಇಲ್ಲದ್ದರಿಂದ ಮಗುವನ್ನು ಸೂಟ್‌ಕೇಸ್‌ನಲ್ಲಿ ಹಾಕಿ, ಮನೆ ಬಿಟ್ಟು ತೆರಳಿದ್ದಾಳೆ. ಸ್ಥಳೀಯರು ಬರುವುದು ಸ್ವಲ್ಪ ತಡವಾಗಿದ್ದರೂ ಮಗು ಸಾವನ್ನಪ್ಪುವ ಸಂಭವವಿತ್ತು ಎನ್ನಲಾಗಿದೆ.
ಇದನ್ನೂ ಓದಿ:
ಸೂಟ್‌ಕೇಸ್‌ನಿಂದ ಹೊರ ತೆಗೆದ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ರಕ್ತದೊತ್ತಡ ತೀರಾ ಏರಿಕೆಯಾಗಿತ್ತು. ಭಯದಿಂದ ಕಣ್ಣೀರು ಹಾಕಿ ಜ್ವರ ಬಂದಿತ್ತು. ಆಮ್ಲಜನಕ ಕೊರತೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹಾಗಾಗಿ ಮಕ್ಕಳ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಮಗು ಸಾಕಷ್ಟು ಸುಧಾರಿಸಿಕೊಂಡಿದೆ.
ಸದ್ಯ ಮಗುವಿನ ತಾಯಿಯನ್ನು ಹುಣಸೂರು ಬಳಿ ಪತ್ತೆಹಚ್ಚಲಾಗಿದೆ. ತಂದೆಯೂ ಚೆನ್ನೈನಿಂದ ಆಗಮಿಸಿದ್ದಾರೆ. ಮಗು ಆಸ್ಪತ್ರೆಯಲ್ಲಿ ಅಜ್ಜಿಯ ಆರೈಕೆಯಲ್ಲಿದೆ. ಯಾವ ಉದ್ದೇಶದಿಂದ ತಾಯಿ ಈ ರೀತಿ ಮಗುವನ್ನು ಸೂಟ್‌ಕೇಸ್‌ಗೆ ಹಾಕಿ ಹೋಗಿದ್ದಾರೆ ಎಂಬುದು ನಿಗೂಢವಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.



