ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಅರ್ಜುನ್ ನಗರದಲ್ಲಿ ರೋಮಹರ್ಷಕ ಘಟನೆಯೊಂದು ನಡೆದಿದೆ. ಸ್ಥಳೀಯ ಆಭರಣದ ಮಳಿಗೆಗೆ ಚಿನ್ನಾಭರಣ ಕೊಳ್ಳಲು ತೆರಳಿದ್ದ ಮಹಿಳೆಯೊಬ್ಬರು ತೀವ್ರ ಬಾಯಾರಿಕೆಯಿಂದಾಗಿ ಜೀವನ್ಮರಣದ ನಡುವೆ ಹೋರಾಡುವಂತಾಗಿದೆ. ಒಡವೆ ವೀಕ್ಷಿಸುತ್ತಿದ್ದಾಗ ಗಂಟಲು ಒಣಗಿದ್ದರಿಂದ ಅವರು ಅಂಗಡಿಯ ಸಿಬ್ಬಂದಿಯ ಬಳಿ ಕುಡಿಯಲು ನೀರು ಕೇಳಿದ್ದಾರೆ.
ನೀರಿನ ಬಾಟಲಿಯಲ್ಲಿ ಅಡಗಿದ್ದ ಅಪಾಯ
ಮಹಿಳೆಯ ದಾಹ ತೀರಿಸಲು ಜ್ಯುವೆಲ್ಲರಿ ಶಾಪ್ನ ನೌಕರ ಪಕ್ಕದಲ್ಲೇ ಇದ್ದ ಸ್ವೀಟ್ ಸ್ಟಾಲ್ಗೆ ಧಾವಿಸಿದ್ದಾನೆ. ಅಲ್ಲಿನ ವ್ಯಾಪಾರಿ ರೆಫ್ರಿಜರೇಟರ್ನಲ್ಲಿದ್ದ, ಸಂಪೂರ್ಣ ಸೀಲ್ ಆಗಿದ್ದ ನೀರಿನ ಬಾಟಲಿಯೊಂದನ್ನು ನೀಡಿದ್ದಾನೆ. ನೌಕರ ಅದನ್ನು ತಂದು ಮಹಿಳೆಗೆ ಕೊಟ್ಟಿದ್ದು, ಅದರಲ್ಲಿ ನೀರಲ್ಲ ಬದಲಿಗೆ ಆ್ಯಸಿಡ್ ಇತ್ತು ಎಂಬ ಕಹಿ ಸತ್ಯ ಯಾರಿಗೂ ತಿಳಿದಿರಲಿಲ್ಲ.
ಒಂದೇ ಸಿಪ್ಗೆ ಸುಟ್ಟುಹೋಯಿತು ಗಂಟಲು: ಐಸಿಯುನಲ್ಲಿ ಚಿಕಿತ್ಸೆ
ಬಾಟಲಿಯ ಸೀಲ್ ಮುರಿದು ಮಹಿಳೆ ತಕ್ಷಣ ಒಂದು ತುತ್ತು ಕುಡಿದಿದ್ದಾರೆ. ಆ್ಯಸಿಡ್ ಗಂಟಲಿಗೆ ಇಳಿಯುತ್ತಿದ್ದಂತೆ ತೀವ್ರ ಉರಿ ಹಾಗೂ ಅಸಹನೀಯ ನೋವಿನಿಂದ ಕಿರುಚಾಡುತ್ತಾ ಮಳಿಗೆಯಿಂದ ಹೊರಗೆ ಓಡಿಬಂದು ಉಗುಳಿದ್ದಾರೆ. ಆದರೆ, ಅಷ್ಟರಲ್ಲೇ ತೀವ್ರ ತರಹದ ಆ್ಯಸಿಡ್ ಪ್ರಭಾವದಿಂದಾಗಿ ಆಕೆಯ ಬಾಯಿ ಹಾಗೂ ಗಂಟಲಿನ ಒಳಭಾಗ ಸಂಪೂರ್ಣ ಸುಟ್ಟುಹೋಗಿದ್ದು, ಸ್ಥಳದಲ್ಲೇ ಮೂರ್ಛೆ ಹೋಗಿದ್ದಾರೆ. ತಕ್ಷಣವೇ ಅವರನ್ನು ಸನಿಹದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಐಸಿಯು (ICU) ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



