July 12, 2026
Sunday, July 12, 2026
spot_img

ಎಸ್‌ಐಆರ್ ಅಭಿಯಾನಕ್ಕೆ ವೇಗ ನೀಡಿ: ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ಖಡಕ್ ಸೂಚನೆ

ಹೊಸದಿಗಂತ ವರದಿ ಬೀದರ್:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ವೇಗವಾಗಿ ನಡೆಸುವಂತೆ ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜುಲೈ 12ರಂದು ಭೇಟಿ ನೀಡಿ ಎಸ್‌ಐಆರ್ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿದ ಅವರು, ಗ್ರಾಮಸ್ಥರೊಂದಿಗೆ ಮಾತನಾಡಿ ಎನ್ಯೂಮರೇಷನ್ ಫಾರ್ಮ್ ಭರ್ತಿ ಹಾಗೂ ಮತದಾರರ ನೋಂದಣಿ ಪ್ರಕ್ರಿಯೆ ಕುರಿತು ಮಾಹಿತಿ ಪಡೆದರಲ್ಲದೇ ಎಸ್ಐಆರ್ ಜಾಗೃತಿ ಮೂಡಿಸಿದರು.

ಈ ವೇಳೆ ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಅಭಿಯಾನ ಮಂದಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಬಿಎಲ್ಓಗಳು ಮನೆಗಳಿಗೆ ಬಂದು ಎನ್ಯೂಮರೇಷನ್ ಫಾರ್ಮ್ ನೀಡಿ ಹೋಗಿದ್ದಾರೆ. ಆದರೆ ಅದನ್ನು ಹೇಗೆ ಭರ್ತಿ ಮಾಡಬೇಕು ಎಂಬ ಬಗ್ಗೆ ಯಾವುದೇ ಮಾಹಿತಿ ಅಥವಾ ಮಾರ್ಗದರ್ಶನ ನೀಡಿಲ್ಲ. ಇದರಿಂದ ಅನೇಕ ಕುಟುಂಬಗಳು ಫಾರ್ಮ್‌ಗಳನ್ನು ಭರ್ತಿ ಮಾಡದೆ ಹಾಗೆಯೇ ಇಟ್ಟುಕೊಂಡಿವೆ. ಕೆಲವು ಬಿಎಲ್ಓಗಳಿಗೆ ಎನ್ಯೂಮರೇಷನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡುವ ವಿಧಾನ ತಿಳಿದಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

ಇದನ್ನೂ ಓದಿ:

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನೋಡೆಲ್ ಅಧಿಕಾರಿಗಳು, ತಹಸೀಲ್ದಾರರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು, ಅಗತ್ಯವಿದ್ದರೆ ಬಿಎಲ್ಓಗಳಿಗೆ ತಕ್ಷಣವೇ ತರಬೇತಿ ನೀಡಿ ಅಭಿಯಾನಕ್ಕೆ ವೇಗ ನೀಡಬೇಕು. ಎಸ್‌ಐಆರ್ ಅಭಿಯಾನಕ್ಕೆ ನಿಯೋಜನೆಗೊಂಡಿರುವ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬಕ್ಕೆ ಅವಕಾಶ ನೀಡಬಾರದು. ಪ್ರತಿಯೊಬ್ಬ ಅರ್ಹ ಮತದಾರರ ಮನೆಗೆ ಭೇಟಿ ನೀಡಿ, ಎನ್ಯೂಮರೇಷನ್ ಫಾರ್ಮ್ ಅನ್ನು ಹೇಗೆ ಭರ್ತಿ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ, ಅಗತ್ಯವಿದ್ದಲ್ಲಿ ಸ್ಥಳದಲ್ಲೇ ನೆರವು ನೀಡಿ ಫಾರ್ಮ್‌ಗಳನ್ನು ಪೂರ್ಣಗೊಳಿಸಬೇಕು.

ಜಾಗೃತಿ ಕೊರತೆ ಅಥವಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ವಂಚಿತರಾಗಬಾರದು. ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಅಧಿಕಾರಿಗಳು ಕೂಡ ಸರಿಯಾಗಿ ಕೆಲಸ ನಿರ್ವಹಿಸಬೇಕು. ಔರಾದ (ಬಿ) ಹಾಗೂ ಕಮಲನಗರ ತಾಲ್ಲೂಕಿನ ಮಹಾಜನತೆ ತಪ್ಪದೇ ಎನ್ಯೂಮರೇಷನ್ ಫಾರ್ಮ್ ಭರ್ತಿ ಮಾಡಿ ಬಿಎಲ್ಓಗಳಿಗೆ ಒಪ್ಪಿಸುವ ಮೂಲಕ ಎಸ್‌ಐಆರ್ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಶಾಸಕರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !