ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಡೆದ ಟ್ರೆಕ್ಕಿಂಗ್ ದುರಂತದ ಹಿನ್ನೆಲೆ ರಾಜ್ಯಾದ್ಯಂತ ಟ್ರೆಕ್ಕಿಂಗ್ ಚಟುವಟಿಕೆಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿತ್ತು. ಚಾರಣಿಗರ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಹೊಸ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಜಾರಿಗೆ ತರುವವರೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಇಷ್ಟು ದಿನ ಕಳೆದರೂ ಎಸ್‌ಒಪಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸದ ಕಾರಣ ರಾಜ್ಯದ ಹಲವೆಡೆ ಟ್ರೆಕಿಂಗ್ ಇನ್ನೂ ಆರಂಭವಾಗಿಲ್ಲ. ಇದು ಟ್ರೆಕ್ಕಿಂಗ್ ಪ್ರಿಯರಿಗೆ ಬೇಸರತರಿಸಿದೆ.
ಇದೀಗ ಮಳೆಗಾಲ ಇರುವ ಕಾರಣ ಟ್ರೆಕ್ಕಿಂಗ್ ಹೋಗೋದಕ್ಕೆ ಚೆನ್ನಾಗಿರುತ್ತದೆ. ಆದರೆ ಈ ಸಮಯದಲ್ಲಿ ಅವಕಾಶ ನೀಡದಿದ್ದರೆ ಮತ್ತೆ ಮುಂದಿನ ವರ್ಷದವರೆಗೂ ಕಾಯಬೇಕಾಗುತ್ತದೆ ಎಂದು ಚಾರಣ ಪ್ರಿಯರು ಬೇಸರಿಸಿಕೊಂಡಿದ್ದಾರೆ.
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದನಾ ಪ್ರಪಾತಕ್ಕೆ ಬಿದ್ದು ದುರ್ಮರಣಕ್ಕೀಡಾಗಿದ್ದರು. ಈ ಘೋರ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ, ಚಾರಣಿಗರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಹೊಸ ಎಸ್‌ಒಪಿ ಜಾರಿಗೆ ತಂದಿದೆ. ಆದರೆ, ಇದರ ಅನುಷ್ಠಾನ ಪ್ರಕ್ರಿಯೆ ತಡವಾಗುತ್ತಿರುವುದರಿಂದ ಚಂದ್ರದ್ರೋಣ ಪರ್ವತದ ಜೊತೆಗೆ ಬೆಂಗಳೂರಿಗರ ಅಚ್ಚುಮೆಚ್ಚಿನ ತಾಣಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಕಂದಗಿರಿ ಮತ್ತು ಕೈವಾರ ಬೆಟ್ಟಗಳಲ್ಲೂ ಚಾರಣ ಚಟುವಟಿಕೆಗಳು ಇನ್ನೂ ಸ್ಥಗಿತಗೊಂಡಿವೆ.
ಚಾರಣದ ರೂಲ್ಸ್ ಏನು?
ಪ್ರತಿ ಹತ್ತು ಮಂದಿಗೆ ಒಬ್ಬರು ಗೈಡ್ ಕಡ್ಡಾಯ. ಅವರ ಬಳಿ ಫಸ್ಟ್ ಏಯ್ಡ್ ಕಿಟ್ ಹಾಗೂ ಟಾರ್ಚ್ ಇರಲೇಬೇಕು.
ಗೈಡ್ ಹಾಗೂ ಚಾರಣಿಗರು ಬೇಸ್ ಕ್ಯಾಂಪ್ ಜತೆ ಸಂಪರ್ಕದಲ್ಲಿರಬೇಕು.
ಟ್ರೆಕ್ಕಿಂಗ್ ಮಾರ್ಗದ ಕೆಎಂಎಲ್ ಫೈಲ್‌ಗಳನ್ನು ಚಾರಣಿಗರ ಫೋನ್‌ನಿಂದ ಅಪ್‌ಲೋಡ್ ಮಾಡಬೇಕು.
ನೆಟ್‌ವರ್ಕ್ ಇಲ್ಲದ ಜಾಗಗಳ ಬಗ್ಗೆ ಮಾಹಿತಿ ನೀಡಬೇಕು.
60 ವರ್ಷ ಮೇಲ್ಪಟ್ಟವರಿಗೆ ಫಿಟ್ನೆಸ್ ಸರ್ಟಿಫಿಕೆಟ್ ಕಡ್ಡಾಯ



