October 18, 2026
Sunday, October 18, 2026
spot_img

ಮೊದಲ ಆರತಿಯ ಹಕ್ಕು ಮೈಸೂರು ಮಹಾರಾಜರಿಗೆ ಮಾತ್ರ, ತಿರುಪತಿಯನ್ನು ರಾಜಕೀಯಕ್ಕೆ ಎಳೀಬೇಡಿ: ಸಿಎಂ ಡಿಕೆಶಿ ಪ್ರಸ್ತಾವನೆಗೆ ಟಿಟಿಡಿ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ರಾಜ್ಯದ ಜನಪ್ರತಿನಿಧಿಗಳು, ಶಾಸಕರು, ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಪ್ರತಿದಿನ ನಡೆಯುವ ಮೊದಲ ಆರತಿಯಲ್ಲಿ ಭಾಗವಹಿಸಲು ಅವಕಾಶ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಈ ಪ್ರಸ್ತಾವನೆಗೆ ತಿರುಮಲ ತಿರುಪತಿ ದೇವಸ್ಥಾನ ತೀವ್ರ ವಿರೋಧ ವ್ಯಕ್ತಪಡಿಸಿದೆ.

ತಿರುಪತಿ ದೇವಾಲಯವನ್ನು ರಾಜಕೀಯ ವೇದಿಕೆಯನ್ನಾಗಿಸಬೇಡಿ. ಇದು ಪವಿತ್ರ ಧಾರ್ಮಿಕ ಕ್ಷೇತ್ರ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಟಿಟಿಡಿ ಟ್ರಸ್ಟ್‌ ಸದಸ್ಯ ಜಿ. ಭಾನುಪ್ರಕಾಶ್‌ ರೆಡ್ಡಿ ಹೇಳಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ, ಕರ್ನಾಟಕದ ಸಚಿವರು, ಶಾಸಕರು, ನ್ಯಾಯಮೂರ್ತಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ರಾಜ್ಯದ ಗಣ್ಯರು ತಿರುಪತಿಗೆ ಭೇಟಿ ನೀಡಿದಾಗ ಮೊದಲ ಆರತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಆದೇಶ ಹೊರಡಿಸಲಾಗುವುದು ಎಂದು ಘೋಷಿಸಿದ್ದರು. ಇದಕ್ಕೆ ಟಿಟಿಡಿ ಉತ್ತರ ನೀಡಿದ್ದು, ಹೌದು, ಮೈಸೂರು ಮಹಾರಾಜರಿಗೆ ಈ ಹಕ್ಕು ನೀಡಿದ್ದು ನಿಜ. ಆದರೆ ಮುಖ್ಯಮಂತ್ರಿ ಅಥವಾ ಸಂಪುಟದ ಶಾಸಕರಿಗೆ ಅಲ್ಲ. ಈ ರೀತಿಯ ಹೊಸ ನಿಯಮವನ್ನು ಏಕಪಕ್ಷೀಯವಾಗಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಈ ಬೇಡಿಕೆಯನ್ನು ಒಪ್ಪಿಕೊಂಡರೆ ನಾಳೆ ತಮಿಳುನಾಡು, ಕೇರಳ ಸೇರಿದಂತೆ ಇತರ ರಾಜ್ಯಗಳೂ ಇದೇ ರೀತಿಯ ಬೇಡಿಕೆ ಇಡುತ್ತವೆ. ಆದ್ದರಿಂದ ಈ ಪ್ರಸ್ತಾವವನ್ನು ವಿರೋಧಿಸುವ ನಿರ್ಣಯವನ್ನು ನಾಳೆ ನಡೆಯಲಿರುವ ಟಿಟಿಡಿ ಮಂಡಳಿ ಸಭೆಯಲ್ಲಿ ಮಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

Must Read