July 14, 2026
Tuesday, July 14, 2026
spot_img

ಸದ್ದಿಲ್ಲದೆ ಸಾಧಿಸುವವರೇ ಶ್ರೇಷ್ಠ ನಾಯಕರು! X ಜಾಲತಾಣದಲ್ಲಿ ಮೋದಿಯನ್ನ ಕೊಂಡಾಡಿದ ಗ್ರಿಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟಿಷ್ ಮೂಲದ ಪ್ರಸಿದ್ಧ ಸಾಹಸಿ ಬೇರ್ ಗ್ರಿಲ್ಸ್ ಇತ್ತೀಚೆಗೆ ‘X’ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಂ ಅವರೊಂದಿಗಿನ ಹಳೆಯ ಚಿತ್ರಗಳನ್ನು ಹಂಚಿಕೊಂಡಿರುವ ಅವರು, ಮೋದಿಯವರನ್ನು ಜಗತ್ತಿನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರೆಂದು ಬಣ್ಣಿಸಿದ್ದಾರೆ. “ನಾನು ಜಗತ್ತಿನ ಅತ್ಯಂತ ಶಕ್ತಿಶಾಲಿ ನಾಯಕರನ್ನು ಭೇಟಿಯಾಗಿದ್ದೇನೆ. ಆದರೆ ಅವರಲ್ಲಿ ಶ್ರೇಷ್ಠರಾದವರು ಎಂದಿಗೂ ಅಬ್ಬರಿಸುವವರಾಗಿರಲಿಲ್ಲ” ಎಂದು ಗ್ರಿಲ್ಸ್ ಬರೆದುಕೊಂಡಿದ್ದಾರೆ.

‘ಮ್ಯಾನ್ ವರ್ಸಸ್ ವೈಲ್ಡ್’ ಮತ್ತು 2019ರ ನೆನಪುಗಳು

ಈ ಹಿಂದೆ 2019ರ ಫೆಬ್ರವರಿಯಲ್ಲಿ ಉತ್ತರಾಖಂಡದ ಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಡಿಸ್ಕವರಿ ಚಾನೆಲ್‌ನ ಜನಪ್ರಿಯ ಶೋ ‘ಮ್ಯಾನ್ ವರ್ಸಸ್ ವೈಲ್ಡ್’ ವಿಶೇಷ ಸಂಚಿಕೆಗಾಗಿ ಪ್ರಧಾನಿ ಮೋದಿ ಅವರು ಬೇರ್ ಗ್ರಿಲ್ಸ್ ಜೊತೆಗೂಡಿ ಸಾಹಸಯಾತ್ರೆ ಕೈಗೊಂಡಿದ್ದರು. ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ಸಂದೇಶ ಸಾರಿದ್ದ ಈ ಸಂಚಿಕೆ ಜಾಗತಿಕವಾಗಿ ಅಪಾರ ವೀಕ್ಷಣೆ ಗಳಿಸಿತ್ತು.

ಶೂಟಿಂಗ್ ಸುತ್ತ ಹೆಣೆದುಕೊಂಡಿದ್ದ ವಿವಾದದ ಹಿನ್ನೆಲೆ

ಆದರೆ, ಈ ಶೋ ಪ್ರಸಾರವಾದ ಸಂದರ್ಭದಲ್ಲಿ ದೇಶದಲ್ಲಿ ತೀವ್ರ ರಾಜಕೀಯ ಆಕ್ರೋಶಕ್ಕೂ ಕಾರಣವಾಗಿತ್ತು. ಜಿಮ್ ಕಾರ್ಬೆಟ್‌ನಲ್ಲಿ ಮೋದಿಯವರ ಶೂಟಿಂಗ್ ನಡೆದ ದಿನವೇ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದು 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇಡೀ ದೇಶವೇ ಕಣ್ಣೀರಲ್ಲಿ ಮುಳುಗಿದ್ದಾಗಲೂ ಪ್ರಧಾನಿ ಮೋದಿ ಸಾಕ್ಷ್ಯಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಇದೀಗ ಗ್ರಿಲ್ಸ್ ಅವರ ಹೊಸ ಪೋಸ್ಟ್‌ನಿಂದಾಗಿ ಈ ಹಳೆಯ ಘಟನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !