ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ದುರ್ಗಾಪೂಜೆ ಪೆಂಡಾಲ್ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ದುರಂತದ ತನಿಖೆಗೆ ಪಶ್ಚಿಮ ಬಂಗಾಳ ಸರ್ಕಾರವು ಕಲ್ಕತ್ತಾ ಹೈಕೋರ್ಟ್ ಸಲಹೆಯ ಮೇರೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಅಕ್ಟೋಬರ್ 17 ರಂದು ಕೋಲ್ಕತ್ತಾದ ಚೋರ್ಬಾಗನ್ ಸರ್ವೊಜನಿಕ ದುರ್ಗಾಪೂಜೆ ಪೆಂಡಾಲ್ನಲ್ಲಿ ನಡೆದ ಈ ಭೀಕರ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಘಟನೆ ನಡೆದು ನಾಲ್ಕು ದಿನಗಳ ಬಳಿಕ, ಅಂದರೆ ಇಂದು (ಅ. 21) ಸರ್ಕಾರ ಈ ಆದೇಶ ಹೊರಡಿಸಿದೆ.
3 ತಿಂಗಳ ಗಡುವು
ರಚಿಸಲಾಗಿರುವ ಹಿರಿಯ ಅಧಿಕಾರಿಗಳ ಎಸ್ಐಟಿ ತಂಡವು ಈ ಭೀಕರ ಘಟನೆಗೆ ಕಾರಣವಾದ ಪರಿಸ್ಥಿತಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದೆ. ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಿ, ಮುಂದಿನ 3 ತಿಂಗಳ ಒಳಗಾಗಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಗಡುವು ನೀಡಲಾಗಿದೆ.
ಉನ್ನತ ಮಟ್ಟದ ಸಮಿತಿ
ಈ ತನಿಖಾ ಸಮಿತಿಯ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ಆನಂದಿತಾ ರಾಯ್ ಸರಸ್ವತಿ ಅವರು ವಹಿಸಲಿದ್ದಾರೆ. ಈ ಸಮಿತಿಯಲ್ಲಿ ಪಶ್ಚಿಮ ಬಂಗಾಳದ ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ವಿಶೇಷ ಕಾರ್ಯಪಡೆಯ (STF) ಪೊಲೀಸ್ ಮಹಾನಿರ್ದೇಶಕರು (DG) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಪ್ರತಿನಿಧಿಗಳು ಸದಸ್ಯರಾಗಿ ಇರಲಿದ್ದಾರೆ.
ಪರಿಹಾರ ಘೋಷಣೆ
ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿದೆ. ಸದ್ಯ ಎಸ್ಟಿಎಫ್ ತಂಡವು ಘಟನೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲು ತನಿಖೆ ಆರಂಭಿಸಿದೆ.
ಇದನ್ನೂ ಓದಿ:
ಇತರ ಪೆಂಡಾಲ್ಗಳಿಗೆ ಕಠಿಣ ಸೂಚನೆ
ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೋಲ್ಕತ್ತಾ ಅಗ್ನಿಶಾಮಕ ದಳವು ದಕ್ಷಿಣ ಕೋಲ್ಕತ್ತಾದ ಪ್ರಮುಖ ಐದು ದುರ್ಗಾಪೂಜೆ ಪೆಂಡಾಲ್ಗಳನ್ನು ತೀವ್ರ ನಿಗಾದಲ್ಲಿ ಇರಿಸಿದೆ. ಪೆಂಡಾಲ್ಗಳಿಗೆ ಬರುವ ಜನಸಂದಣಿಯನ್ನು ನಿಯಂತ್ರಿಸಲು ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಪೂಜಾ ಸಮಿತಿಗಳಿಗೆ ಲಿಖಿತ ಆದೇಶ ನೀಡಲಾಗಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರೊಂದಿಗೆ (DGP) ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.



