ಹೊಸದಿಗಂತ ವರದಿ ಚಿತ್ರದುರ್ಗ
ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿ ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿದ್ದ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಮರುಪರಿಶೀಲಿಸಿ, ಸಾಲ ಮಂಜೂರಾತಿ ಮಾಡಲು ಲೀಡ್ ಬ್ಯಾಂಕ್ ವತಿಯಿಂದ ವಿಶೇಷ ಕ್ರಮ ವಹಿಸಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಪಿ. ಪ್ರವೀಣ್ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ‘ಪಿಎಂ ವಿಶ್ವಕರ್ಮ ಸಾಲ ಮೇಳ’ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಂಪ್ರದಾಯಿಕ ಕಸುಬುಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದ “ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿಯೂ ಸೇರಿದಂತೆ ಜಿಲ್ಲೆಯಾದ್ಯಂತ ಜುಲೈ 14 ರಿಂದ 24 ರವರೆಗೆ 10 ದಿನಗಳ ಕಾಲ ವಿಶೇಷ ಸಾಲ ಸಂಪರ್ಕ ಶಿಬಿರ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ಸುಮಾರು 5,400 ಕ್ಕೂ ಹೆಚ್ಚು ನಾಗರಿಕರು ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಸಲ್ಲಿಸಿದ ನಂತರ ಅರ್ಜಿದಾರರು ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡದ ಕಾರಣ ಅಥವಾ ಬ್ಯಾಂಕ್ ಅಧಿಕಾರಿಗಳಿಗೆ ಸಂಪರ್ಕಕ್ಕೆ ಸಿಗದ ಕಾರಣ ತಾಂತ್ರಿಕವಾಗಿ ಸಾಲದ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಅಂತಹ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಪುನಃ ಸಕ್ರಿಯಗೊಳಿಸಲು ಈ ವಿಶೇಷ ಸಾಲ ಮೇಳವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರನ್ನು ಈ ಸಭೆಗೆ ಕರೆಸಲಾಗಿದ್ದು, ಸ್ಥಳದಲ್ಲೇ ಅರ್ಜಿಗಳನ್ನು ಪರಿಶೀಲಿಸಿ ಸಾಲ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪಿಎಂ ವಿಶ್ವಕರ್ಮ ಯೋಜನೆಯಡಿ ಈ ಹಿಂದೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿರುವ ಅರ್ಹ ವಿಶ್ವಕರ್ಮ ಫಲಾನುಭವಿಗಳಿಗೆ ಬ್ಯಾಂಕ್ನ ಕಾಲ್ ಸೆಂಟರ್ ಮೂಲಕ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಈ ಶಿಬಿರಕ್ಕೆ ಭೇಟಿ ನೀಡಬೇಕು. ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿಯಾಗಿ ಅಗತ್ಯ ಫಾರಂಗಳನ್ನು ಸಲ್ಲಿಸುವ ಮೂಲಕ ಯೋಜನೆಯಡಿ ಸಿಗುವ ಸಾಲ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಎಂಎಸ್ಎಂಇ ಡಿಎಫ್ಒ ಸಂಜೀವ್ ಕುಮಾರ್ ಗುಪ್ತ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದು ಪ್ರಮಾಣಪತ್ರ ಹೊಂದಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಪ್ರಾರಂಭಿಸಲು ಈ ಸಾಲ ಮೇಳವು ಅತ್ಯಂತ ಸಹಕಾರಿಯಾಗಿದೆ ಎಂದರು.
ಇದನ್ನೂ ಓದಿ:
ಕಮ್ಮಾರರು, ಚಿನ್ನದ ಕೆಲಸ ಮಾಡುವವರು, ಮಾಲೆಗಾರರು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತರಬೇತಿ ಪಡೆದ ಅರ್ಹ ಫಲಾನುಭವಿಗಳಿಗೆ ತಮ್ಮದೇ ಆದ ಸ್ವಂತ ಉದ್ಯಮ ಪ್ರಾರಂಭಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಬ್ಯಾಂಕ್ಗಳ ಮೂಲಕ ಸುಲಭವಾಗಿ ಸಾಲ ಒದಗಿಸುವುದು ಮತ್ತು ಅಗತ್ಯ ಮಾರ್ಗದರ್ಶನ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಗನ್ನಾಥ್, ಚಿತ್ರದುರ್ಗ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಂ.ರಾಘವೇಂದ್ರ ಹಾಜರಿದ್ದರು. ಇದೇ ಸಂದರ್ಭದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಮಂಜೂರಾತಿ ಆದೇಶ ಪತ್ರ ನೀಡಲಾಯಿತು.



