ಹೊಸದಿಗಂತ ವರದಿ ಚಿತ್ರದುರ್ಗ
ಮುದ್ರಣ ಮಾಧ್ಯಮದ ಬಗ್ಗೆ ಎಲ್ಲರೂ ಅಭಿಮಾನ ಇಟ್ಟುಕೊಳ್ಳಬೇಕು. ಅತ್ಯಂತ ಜವಾಬ್ದಾರಿಯುತ ರಂಗ ಎಂದರೆ ಅದು ಪತ್ರಿಕಾ ರಂಗ. ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ – ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾ ಮತ್ತು ಚಳ್ಳಕೆರೆ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಚಳ್ಳಕೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಗಳಲ್ಲಿ ಕಾರ್ಯವೈಖರಿಗಳು ವಿಫಲವಾಗದಂತೆ ಕಾಯುವ ಮತ್ತು ಎಚ್ಚರಿಸುವ ರಂಗ ಪತ್ರಿಕಾರಂಗವಾಗಿರುವುದರಿಂದ ಪತ್ರಕರ್ತರು ಇಚ್ಛಾಶಕ್ತಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಕ್ಕೆ, ಜನಹಿತಕ್ಕೆ ದುಡಿಯುವ ಪತ್ರಕರ್ತರು ನಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಸವಲತ್ತುಗಳು ನಿಜವಾದ ಪತ್ರಕರ್ತರಿಗೆ ಲಭ್ಯವಾಗುತ್ತಿಲ್ಲ. ನಿಜವಾದ ಪತ್ರಕರ್ತರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುವಲ್ಲಿಯೂ ಕೂಡಾ ಸಂಬಂಧಪಟ್ಟ ಇಲಾಖೆ ಇಲ್ಲಸಲ್ಲದ ಮಾನದಂಡಗಳನ್ನು ವಿಧಿಸುತ್ತಿರುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ಇಲಾಖೆಗೆ ನ್ಯಾಯಾಲಯದ ಮೂಲಕವಾದರೂ ಸಂಘ ಉತ್ತರ ಕೊಡಲು ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಶ.ಮಂಜುನಾಥ ಅವರು ಮಂಕುತಿಮ್ಮನ ಕಗ್ಗ ಖ್ಯಾತಿಯ ಡಿ.ವಿ.ಗುಂಡಪ್ಪ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪತ್ರಿಕಾ ದಿನಾಚರಣೆ ಮಹತ್ವ, ಸಂವಿಧಾನ ತಜ್ಞ, ವಿಶ್ವಜ್ಞಾನಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಧನಿ ಇಲ್ಲದವರಿಗೆ, ಸರ್ವರ ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಆರಂಭಿಸಿದ ಪತ್ರಿಕೆಗಳು ಹಾಗೂ ಡಿ.ವಿ. ಗುಂಡಪ್ಪ ಅವರ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ಬೋರಪ್ಪಾಜಿ ಶಿಕ್ಷಣ ಸೇವಾ ಪ್ರಶಸ್ತಿ ಸ್ವೀಕರಿಸಿದ ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ಮಾತನಾಡಿ, ತಪ್ಪು ಮಾಡಿದವರನ್ನು ತಿದ್ದುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು. ಓದುವ ಹವ್ಯಾಸ ಇಂದಿನ ಪೀಳಿಗೆಯಲ್ಲಿ ಕಡಿಮೆಯಾಗಿದೆ. ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಮಕ್ಕಳಿಗೆ ಹೇಳಿಕೊಡಬೇಕಿದೆ ಎಂದ ಅವರು, ದಿವಂಗತ ಡಿ.ಬೋರಪ್ಪ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿದರು.
ಇದನ್ನೂ ಓದಿ:
ಉಪನ್ಯಾಸಕ ನಾಗರಾಜ್ ಬೆಳಗಟ್ಟ ಹಾಗೂ ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಎಸ್.ಎಸ್. ಪಾಟೀಲ ಅವರಿಗೆ ಬುದ್ಧ ಬಸವ ಅಂಬೇಡ್ಕರ್ ಪ್ರಶಸ್ತಿ, ಪತ್ರಕರ್ತ ರಾಜಗಿರಿ ಅವರಿಗೆ ಬೆಳಗೆರೆ ರಾಜ್ಯ ಪ್ರಶಸ್ತಿ, ಸೂರನಹಳ್ಳಿ ಕೆ.ಜಗದೀಶ್ ಅವರಿಗೆ ಕರ್ನಾಟಕ ಸಹಕಾರ ರತ್ನ ರಾಜ್ಯ ಪ್ರಶಸ್ತಿ, ಜಿ.ಜೆ.ಸತ್ಯನಾರಾಯಣ ಅವರಿಗೆ ಸರ್ವೋತ್ತಮ ಸೇವಾ ರಾಜ್ಯ ಪ್ರಶಸ್ತಿ, ಎನ್.ಮಹೇಶ್ ಅವರಿಗೆ ಲಂಕೇಶ್ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪತ್ರಿಕಾ ದಿನಾಚರಣೆ ಅಂಗವಾಗಿ ಐವತ್ತಕ್ಕೂ ಹೆಚ್ಚು ಕಡು ಬಡವರಿಗೆ ಉತ್ತಮ ಹೊದಿಕೆಗಳನ್ನು ವಿತರಣೆ ಮಾಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳಾದ ನಿರ್ಮಲಾ, ಶಿಲ್ಪಾ, ಹರೀಶ್, ಕೃಷ್ಣಮೂರ್ತಿ, ಸಂಗನಗೌಡ ಹೊನ್ನಾವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



