July 14, 2026
Tuesday, July 14, 2026
spot_img

ಬೆಚ್ಚಿಬಿದ್ದ ಇಂಗ್ಲೆಂಡ್‌ಗೆ ಆಸರೆಯಾದ ರೂಟ್-ಡಾಸನ್: ಭಾರತಕ್ಕೆ ಗೆಲ್ಲಲು 259 ರನ್ ಬೇಟೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರ್ಮಿಂಗ್ಹ್ಯಾಮ್‌ನಲ್ಲಿ ಆರಂಭವಾಗಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡಕ್ಕೆ ಆತಿಥೇಯರು 259 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಸಿಲುಕಿ 47.5 ಓವರ್‌ಗಳಲ್ಲಿ 258 ರನ್‌ಗಳಿಗೆ ಸರ್ವಪತನ ಕಂಡಿತು.

ಆರಂಭಿಕ ಆಘಾತ ಮತ್ತು ರೂಟ್-ಡಾಸನ್ ಚೇತರಿಕೆ

ಆರಂಭದಲ್ಲಿ ವಿಕೆಟ್ ನಷ್ಟವಿಲ್ಲದೆ 61 ರನ್ ಗಳಿಸಿ ಇಂಗ್ಲೆಂಡ್ ಭರ್ಜರಿ ಮುನ್ನುಡಿ ಬರೆಯಿತು. ಆದರೆ, ದಿಢೀರ್ ಕುಸಿತ ಕಂಡ ತಂಡ 107 ರನ್ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಬೆನ್ ಡಕೆಟ್ (43 ರನ್) ಹೊರತುಪಡಿಸಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಈ ಹಂತದಲ್ಲಿ ಒಂದಾದ ಜೋ ರೂಟ್ (ಅಜೇಯ 76) ಮತ್ತು ಲಿಯಾಮ್ ಡಾಸನ್ (68) ಜವಾಬ್ದಾರಿಯುತ ಆಟವಾಡಿ 7ನೇ ವಿಕೆಟ್‌ಗೆ 121 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿ ತಂಡವನ್ನು ಗೌರವಯುತ ಮೊತ್ತಕ್ಕೆ ತಲುಪಿಸಿದರು.

ಅಕ್ಷರ್ ಪಟೇಲ್ ಬೌಲಿಂಗ್ ಜಾದೂ

ಭಾರತದ ಪರ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ 62 ರನ್‌ಗಳಿಗೆ 4 ಪ್ರಮುಖ ವಿಕೆಟ್ ಕಬಳಿಸಿದರು. ಇವರಿಗೆ ಸಾಥ್ ನೀಡಿದ ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ತಲಾ 2 ವಿಕೆಟ್ ಉರುಳಿಸಿದರೆ, ಜಸ್ಪ್ರಿತ್ ಬುಮ್ರಾ ಹಾಗೂ ಶಿವಂ ದುಬೆ ತಲಾ ಒಂದು ವಿಕೆಟ್ ಹಂಚಿಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !