ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಪ್ರಭಾವ ಬೀರಬಲ್ಲ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತ ಅತ್ಯಂತ ಪ್ರಮುಖವಾಗಿದೆ ಎಂದು ಪೋಲೆಂಡ್ ದೇಶದ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಶೆವ್ಸ್ಕಿ ಅಭಿಪ್ರಾಯಪಟ್ಟಿದ್ದಾರೆ. ಉಕ್ರೇನ್ ಜೊತೆಗಿನ ಕದನದಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಪರಮಾಣು ಯುದ್ಧ ತಪ್ಪಿಸಿದ ಭಾರತ!
2022ರ ಕೊನೆಯ ಭಾಗದಲ್ಲಿ ನಡೆದ ಆತಂಕಕಾರಿ ಘಟನೆಯನ್ನು ನೆನಪಿಸಿಕೊಂಡ ಸಚಿವರು, ಅಂದು ಉಕ್ರೇನ್ ವಿರುದ್ಧ ರಷ್ಯಾ ‘ಟ್ಯಾಕ್ಟಿಕಲ್’ ಪರಮಾಣು ಅಸ್ತ್ರಗಳನ್ನು ಪ್ರಯೋಗಿಸದಂತೆ ಮನವೊಲಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದರು ಎಂದಿದ್ದಾರೆ. ಜಾಗತಿಕವಾಗಿ ಮೋದಿಯವರು ಅತ್ಯಂತ ಗೌರವಾನ್ವಿತ ಮತ್ತು ಪ್ರಭಾವಿ ರಾಜತಾಂತ್ರಿಕರಾಗಿದ್ದು, ಐತಿಹಾಸಿಕ ಸ್ನೇಹದ ಹಿನ್ನೆಲೆಯಲ್ಲಿ ಪುಟಿನ್ ಅವರು ಮೋದಿಯವರ ಮಾತುಗಳನ್ನು ಬಹಳ ಸೂಕ್ಷ್ಮವಾಗಿ ಆಲಿಸುತ್ತಾರೆ ಎಂದು ಎಎನ್‌ಐ ಸಂದರ್ಶನದಲ್ಲಿ ಬಣ್ಣಿಸಿದ್ದಾರೆ.
ಜಾಗತಿಕ ಒತ್ತಡ ಮತ್ತು ರಷ್ಯಾ ನಡೆ
ಅಮೆರಿಕ ಅಥವಾ ಯುರೋಪಿಯನ್ ಒಕ್ಕೂಟಗಳಿಗಿಂತ ರಷ್ಯಾದೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವ ಭಾರತದಂತಹ ರಾಷ್ಟ್ರಗಳ ಮಾತುಗಳಿಗೆ ಮಾಸ್ಕೋದಲ್ಲಿ ಹೆಚ್ಚಿನ ತೂಕವಿರುತ್ತದೆ. ಕೇವಲ ಮೋದಿಯವರು ಮಾತ್ರವಲ್ಲದೆ ಚೀನಾದ ಕ್ಸಿ ಜಿನ್‌ಪಿಂಗ್ ಕೂಡ ಈ ವಿನಾಶಕಾರಿ ಯುದ್ಧದ ತೀವ್ರತೆ ಹೆಚ್ಚಾಗುವುದನ್ನು ತಡೆಯಲು ಬಯಸಿದ್ದಾರೆ ಎಂದು ಬಾರ್ಟೋಶೆವ್ಸ್ಕಿ ಹೇಳಿದ್ದಾರೆ.



