ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಪರ-ವಿರೋಧ ಹೋರಾಟಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಯೋಜನೆಗೆ 2 ತಿಂಗಳ ಕಾಲ ತಾತ್ಕಾಲಿಕ ಬ್ರೇಕ್ ಹಾಕಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯೋಜನೆಯನ್ನು ಸದ್ಯಕ್ಕೆ ಮುಂದೂಡುತ್ತಿರುವುದಾಗಿ ಪ್ರಕಟಿಸಿದ್ದಾರೆ.
ಸಣ್ಣ ಸಮಿತಿ ರಚನೆ:
ಯೋಜನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಸಂಪುಟ ಸಭೆಯಲ್ಲಿ ಚರ್ಚಿಸಿ ಒಂದು ಸಣ್ಣ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯು ಮುಂದಿನ 2 ತಿಂಗಳಲ್ಲಿ ಸಮಗ್ರ ವರದಿ ನೀಡಲಿದ್ದು, ಅಲ್ಲಿಯವರೆಗೆ ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಗಳು ನಡೆಯುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ರೈತರ ಭೂಮಿಗೆ ಬಲವಂತವಿಲ್ಲ:
ಜಮೀನು ಸ್ವಾಧೀನದ ಕುರಿತು ಮಾತನಾಡಿದ ಸಿಎಂ, ಯೋಜನೆಗೆ ಭೂಮಿ ನೀಡಲು ಇಷ್ಟ ಇದ್ದವರು ಕೊಡಲಿ, ಇಷ್ಟವಿಲ್ಲದವರು ಬೇಡ. ಯಾರನ್ನೂ ಬಲವಂತ ಮಾಡುವುದಿಲ್ಲ. ಆದರೆ ಇದು ನಿರಂತರ ಪ್ರಕ್ರಿಯೆಯಾಗಿದ್ದು, ಸಮಿತಿ ವರದಿ ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ:
ಇದು ನನ್ನ ಕನಸಿನ ಯೋಜನೆ ಅಲ್ಲ:
ಬಿಡದಿಯಲ್ಲಿ ನಡೆದ ಪ್ರತಿಭಟನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಡಿಕೆಶಿ, ಬಿಡದಿ ಟೌನ್‌ಶಿಪ್ ನನ್ನ ಕನಸಿನ ಯೋಜನೆಯಲ್ಲ, ಇದಕ್ಕೆ ನಾನೇನೂ ಫೌಂಡೇಶನ್ ಹಾಕಿಲ್ಲ. ನಾನೊಬ್ಬ ರೈತನ ಮಗನಾಗಿ ರೈತರ ಕಷ್ಟ ಏನೆಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ನಾನು ಮುಖ್ಯಮಂತ್ರಿಯಾಗಿದ್ದನ್ನು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ನನ್ನ ವಿರುದ್ಧ ರಾಜಕೀಯ ಮಾಡಲು ಕೆಲವರು ನಿದ್ದೆಯನ್ನೇ ಬಿಟ್ಟಿದ್ದಾರೆ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.



