ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ನೋಯ್ಡಾದ ಮಾಮುರಾ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಜಿ+4 ಮಾದರಿಯ ನಾಲ್ಕು ಮಹಡಿಗಳ ವಸತಿ ಕಟ್ಟಡದ ಪಾರ್ಕಿಂಗ್ ಏರಿಯಾದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಎಲೆಕ್ಟ್ರಿಕ್ ವಾಹನವೊಂದನ್ನು (EV) ಚಾರ್ಜ್ ಮಾಡುತ್ತಿದ್ದಾಗ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಬೆಂಕಿ ಪಕ್ಕದಲ್ಲಿದ್ದ ಪೆಟ್ರೋಲ್ ವಾಹನಗಳಿಗೂ ವ್ಯಾಪಿಸಿ, ಇಡೀ ಪಾರ್ಕಿಂಗ್ ಪ್ರದೇಶವನ್ನು ಸುಟ್ಟು ಭಸ್ಮ ಮಾಡಿದೆ.
ದಟ್ಟ ಹೊಗೆಗೆ ಇಬ್ಬರು ಬಲಿ
ಪಾರ್ಕಿಂಗ್ ವಲಯದಿಂದ ಹೊರಹೊಮ್ಮಿದ ಕಡು ಕಪ್ಪು ಹೊಗೆ ಇಡೀ ನಾಲ್ಕು ಮಹಡಿಗಳಿಗೆ ಆವರಿಸಿಕೊಂಡಿತು. ಇದರಿಂದಾಗಿ ನಿವಾಸಿಗಳು ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾಗಿ ಮನೆಗಳಲ್ಲೇ ಸಿಲುಕಿಕೊಂಡರು. ಕೃತಕ ಉಸಿರಾಟದ ತೊಂದರೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಇಬ್ಬರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಗೌತಮ್ ಬುದ್ಧ ನಗರದ ಜಂಟಿ ಪೊಲೀಸ್ ಆಯುಕ್ತ ರಾಜೀವ್ ನರೈನ್ ತಿಳಿಸಿದ್ದಾರೆ.
50 ಕುಟುಂಬಗಳ ಸಾಹಸಮಯ ರಕ್ಷಣೆ
ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ, 7 ಅಗ್ನಿಶಾಮಕ ವಾಹನ ಹಾಗೂ ಹೈಡ್ರಾಲಿಕ್ ಪ್ಲಾಟ್ಫಾರ್ಮ್ ಬಳಸಿ ಕಟ್ಟಡದಲ್ಲಿದ್ದ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



