ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಪ್ರತಿಭಟನೆ ಹಾಗೂ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ಮತ್ತು ಭಾವುಕತೆಯನ್ನು ಹೊರಹಾಕಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧಿಗಳ ರಾಜಕೀಯ ಪ್ರೇರಿತ ಕುಮ್ಮಕ್ಕಿನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನನಗೆ ಪೊರಕೆಯಿಂದ ಹೊಡೆಯಲಿ:
ಬಿಡದಿಯಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ತೊಂದರೆ ಕೊಟ್ಟಿರುವುದು ನನ್ನ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಅಧಿಕಾರಿಗಳು ಕೇವಲ ಸರ್ಕಾರದ ಆದೇಶ ಪಾಲಿಸುತ್ತಾರಷ್ಟೇ. ಇದರಲ್ಲಿ ಅವರ ತಪ್ಪೇನೂ ಇರುವುದಿಲ್ಲ. ಒಂದು ವೇಳೆ ಸರ್ಕಾರ ತಪ್ಪು ಮಾಡಿದೆ ಎಂದು ಅನ್ನಿಸಿದರೆ, ಬೇಕಿದ್ದರೆ ಬಂದು ನನಗೆ ಪೊರಕೆಯಿಂದ ಹೊಡೆಯಲಿ, ನಾನು ಹೊಡೆಸಿಕೊಳ್ಳಲು ಸಿದ್ಧನಿದ್ದೇನೆ. ಆದರೆ ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಕೈ ಮಾಡುವುದು ಸರಿಯಲ್ಲ ಎಂದು ಡಿಕೆಶಿ ಭಾವುಕರಾಗಿ ನುಡಿದರು.
ಇದನ್ನೂ ಓದಿ:
ರಾಜಕೀಯ ಪ್ರೇರಿತ ಸಂಚು:
ನಾನು ಮುಖ್ಯಮಂತ್ರಿಯಾಗಿದ್ದಕ್ಕೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿಯೇ ಬಿಡದಿ ಟೌನ್‌ಶಿಪ್ ನೆಪವಿಟ್ಟುಕೊಂಡು ಜನರನ್ನು ಎತ್ತಿಕಟ್ಟಲಾಗುತ್ತಿದೆ. ಇದು ನನ್ನ ಕನಸಿನ ಯೋಜನೆಯಲ್ಲ, ನಾನು ಇದಕ್ಕೆ ಫೌಂಡೇಶನ್ ಹಾಕಿಲ್ಲ. ಆದರೂ ನನ್ನನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಇದೇ ವೇಳೆ ರೈತರ ಹಿತದೃಷ್ಟಿಯಿಂದ ಬಿಡದಿ ಉಪನಗರ ಯೋಜನೆಗೆ ಸದ್ಯ 2 ತಿಂಗಳ ಕಾಲ ತಾತ್ಕಾಲಿಕ ಬ್ರೇಕ್ ಹಾಕುತ್ತಿರುವುದಾಗಿ ಮತ್ತು ಕ್ಯಾಬಿನೆಟ್ ಸಮಿತಿ ರಚಿಸಿ ವರದಿ ಪಡೆಯುವುದಾಗಿ ತಿಳಿಸಿದರು.



