ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನ ಗ್ಲಾಮರಸ್ ನಟಿ ಮೌನಿ ರಾಯ್ ಇತ್ತೀಚೆಗೆ ಮುಂಬೈ ಬೀದಿಗಳಲ್ಲಿ ಕ್ಯಾಮೆರಾ ಕಣ್ಣುಗಳ ಅತಿರೇಕದ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಜುಲೈ 14ರ ಮಂಗಳವಾರ ತಡರಾತ್ರಿ ಮುಂಬೈನ ಬಾಂದ್ರಾದ ಪ್ರತಿಷ್ಠಿತ ಹೋಟೆಲ್ ಒಂದರಿಂದ ತಮ್ಮ ಆಪ್ತ ಗೆಳತಿ ಅನುಷಾ ದಾಂಡೇಕರ್ ಅವರೊಂದಿಗೆ ಮೌನಿ ಹೊರಬಂದಾಗ ಈ ಅಹಿತಕರ ಘಟನೆ ನಡೆದಿದೆ.
ಗಡಿ ಮೀರಿದ ಕ್ಯಾಮೆರಾ ಕಣ್ಣುಗಳು
ಹೋಟೆಲ್ನಿಂದ ನಟಿ ಹೊರಬರುತ್ತಿದ್ದಂತೆಯೇ ಪಾಪರಾಜಿಗಳು ಅವರ ಸುತ್ತಲೂ ಮುತ್ತಿಕೊಂಡಿದ್ದಾರೆ. ಮೊದಲಿಗೆ ಶಾಂತರಾಗಿಯೇ ಕಾರಿನತ್ತ ಸಾಗಿದ ಮೌನಿ ರಾಯ್, ವಾಹನದೊಳಗೆ ಆಸೀನರಾದ ಮೇಲೂ ಫೋಟೋಗ್ರಾಫರ್ಗಳ ಹಾವಳಿ ನಿಂತಿಲ್ಲ. ಕಾರಿನ ಗ್ಲಾಸ್ ತೀರಾ ಹತ್ತಿರಕ್ಕೆ ಕ್ಯಾಮೆರಾಗಳನ್ನು ತಂದು ಫೋಟೋ ಕ್ಲಿಕ್ಕಿಸಲು ಹಾಗೂ ವಿಡಿಯೋ ಮಾಡಲು ಮುಂದಾಗಿದ್ದು ನಟಿಗೆ ತೀವ್ರ ಮುಜುಗರ ಉಂಟುಮಾಡಿದೆ.
ರೊಚ್ಚಿಗೆದ್ದ ನಟಿಯ ಆಕ್ರೋಶ
ಖಾಸಗಿತನಕ್ಕೆ ಧಕ್ಕೆ ಬಂದಿದ್ದರಿಂದ ಅಸಮಾಧಾನಗೊಂಡ ಮೌನಿ, ಕಾರಿನೊಳಗಿನಿಂದಲೇ ಸಿಟ್ಟಿನಿಂದ ‘ಬಂದ್ ಕರೋ’ (ವಿಡಿಯೋ ನಿಲ್ಲಿಸಿ) ಎಂದು ಗದರಿದ್ದಾರೆ. ಆದರೂ ಫೋಟೋಗ್ರಾಫರ್ಗಳು ವಿಡಿಯೋ ಮಾಡುವುದನ್ನು ಮುಂದುವರಿಸಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಿದ ಗೆಳತಿ ಅನುಷಾ ದಾಂಡೇಕರ್, ಕ್ಯಾಮೆರಾ ಆಫ್ ಮಾಡುವಂತೆ ಕೈಸನ್ನೆ ಮಾಡಿ ವಿನಂತಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸೆಲೆಬ್ರಿಟಿಗಳ ಖಾಸಗಿತನದ ಬಗ್ಗೆ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.



