July 16, 2026
Thursday, July 16, 2026
spot_img

WEATHER | ಮುಂದಿನ ಒಂದು ವಾರ ಮಳೆ ಕೊರತೆ: ಈ ಜಿಲ್ಲೆಗಳಲ್ಲಷ್ಟೇ ವರ್ಷಧಾರೆ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ವರುಣನ ಆರ್ಭಟ ಸದ್ಯಕ್ಕೆ ತಣ್ಣಗಾಗಿದೆ. ರಾಜ್ಯದಲ್ಲಿ ಸಕ್ರಿಯಗೊಳ್ಳಬೇಕಿದ್ದ ನೈಋತ್ಯ ಮುಂಗಾರು ಇನ್ನೂ ಆಮೆಗತಿಯಲ್ಲೇ ಸಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ಪ್ರಕಾರ, ಮುಂದಿನ ಒಂದು ವಾರದವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇಲ್ಲ. ಆದರೆ, ಜುಲೈ 16 ಮತ್ತು 17 ರಂದು ಆಯ್ದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದೆಡೆ ಬಿರುಗಾಳಿಯ ತೀವ್ರತೆ ಹೆಚ್ಚಿರಲಿದೆ.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ವರ್ಷಧಾರೆ

ಮುಂದಿನ ಎರಡು ದಿನಗಳ ಕಾಲ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನದ ಬದಲಾವಣೆಯಿಂದಾಗಿ ಈ ಭಾಗದಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ತಂಗಾಳಿ ಬೀಸಲಿದೆ. ಇತ್ತ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣ ಮಳೆಯನ್ನು ನಿರೀಕ್ಷಿಸಬಹುದಾಗಿದೆ.

ಒಣ ಹವೆ ಮತ್ತು ಬಿರುಗಾಳಿಯ ಮುನ್ಸೂಚನೆ

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಹಾಗೂ ಜುಲೈ 16 ರಂದು ಬೀದರ್ ಜಿಲ್ಲೆಯ ಕೆಲವೆಡೆ ಮಳೆ ಸಿಂಚನವಾಗಲಿದೆ. ಜುಲೈ 17 ಕ್ಕೆ ಬೀದರ್‌ನಲ್ಲಿ ಮಳೆ ಕಡಿಮೆಯಾಗಲಿದ್ದರೂ ಗಾಳಿಯ ಅಬ್ಬರ ಇರಲಿದೆ. ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬಲವಾದ ಗಾಳಿ ಬೀಸಲಿದೆ.

ಮತ್ತೊಂದೆಡೆ ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ರಾಮನಗರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ತೀರಾ ವಿರಳವಾಗಿದ್ದು, ಗಂಟೆಗೆ 40 ಕಿ.ಮೀ ವೇಗದ ಗಾಳಿ ಮಾತ್ರ ಜನಸಾಮಾನ್ಯರಿಗೆ ನಿರಾಸೆ ಮೂಡಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !