July 16, 2026
Thursday, July 16, 2026
spot_img

ಪಾಕ್ ಪ್ರೇಯಸಿಗಾಗಿ ಗಡಿ ದಾಟಿದ ಭಾರತೀಯ ಯುವಕ ಈಗ ಲಾಹೋರ್ ಜೈಲುಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಅಲಿಗಢ ಮೂಲದ ಟೈಲರ್ ಬಾದಲ್ ಬಾಬು ಎಂಬುವರು ಸಾಮಾಜಿಕ ಜಾಲತಾಣದ ವ್ಯಾಮೋಹಕ್ಕೆ ಬಿದ್ದು, ಈಗ ಪಾಕಿಸ್ತಾನದ ಕೋಟ್ ಲಖ್ಪತ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಫೇಸ್‌ಬುಕ್‌ನಲ್ಲಿ ಪಾಕ್ ಮೂಲದ ಸನಾ ಎಂಬಾಕೆಯ ಪರಿಚಯವಾಗಿ, ಅದು ಪ್ರೀತಿಯಾಗಿ ಬದಲಾಗಿತ್ತು.

ವೀಸಾ ಇಲ್ಲದೆ ಗಡಿ ದಾಟಿದ ಸಾಹಸ

ಪ್ರೇಯಸಿಯನ್ನು ಭೇಟಿಯಾಗುವ ಹಠಕ್ಕೆ ಬಿದ್ದ ಬಾದಲ್, ಅಕ್ಟೋಬರ್ 2024 ರಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತ-ಪಾಕಿಸ್ತಾನ ಗಡಿಯನ್ನು ದಾಟಿದ್ದರು. ಆದರೆ ಅಲ್ಲಿಗೆ ತಲುಪಿದಾಗ ಸನಾ ಮದುವೆಗೆ ನಿರಾಕರಿಸಿ ಕೈಕೊಟ್ಟಿದ್ದಳು. ಇದರಿಂದ ಬೇಸತ್ತು ಭಾರತಕ್ಕೆ ಮರಳದ ಅವರು, ಅಲ್ಲೇ ಮೇಕೆ ಮೇಯಿಸುವ ಕೆಲಸಕ್ಕೆ ಸೇರಿದ್ದರು.

ಭಾಷೆಯಿಂದ ಸಿಕ್ಕಿಬಿದ್ದ ಪ್ರೇಮಿ

ಡಿಸೆಂಬರ್ 2024 ರಲ್ಲಿ ಮೇಕೆ ಮೇಯಿಸುವಾಗ ಬಾದಲ್ ಆಡುತ್ತಿದ್ದ ಹಿಂದಿ ಉಪಭಾಷೆಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣವೇ ಪಾಕ್ ಭದ್ರತಾ ಪಡೆಗಳು ಅವರನ್ನು ಬಂಧಿಸಿದವು.

ಶಿಕ್ಷೆ ಮುಗಿದರೂ ಮುಗಿಯದ ಜೈಲುವಾಸ

ವಿಶೇಷವೆಂದರೆ ನ್ಯಾಯಾಲಯ ವಿಧಿಸಿದ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ, ಉಭಯ ದೇಶಗಳ ನಡುವಿನ ‘ಸ್ವದೇಶ ವಾಪಸಾತಿ’ ಪ್ರಕ್ರಿಯೆಯ ವಿಳಂಬದಿಂದಾಗಿ ಅವರು ಇಂದಿಗೂ ಜೈಲಿನಲ್ಲೇ ಕೊಳೆಯುತ್ತಿದ್ದಾರೆ.

ಮಗನಿಗಾಗಿ ಹೆತ್ತವರ ಕಣ್ಣೀರು

ಕಳೆದ 20 ತಿಂಗಳುಗಳಿಂದ ಮಗ ಜೈಲಿನಲ್ಲಿರುವುದನ್ನು ಕಂಡು ಅಲಿಗಢದಲ್ಲಿರುವ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಬಾದಲ್ ಅವರ ಪೌರತ್ವದ ದಾಖಲೆಗಳನ್ನು ಪರಿಶೀಲಿಸಿ ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಸ್ಥಳೀಯ ಸಂಸದ ಸತೀಶ್ ಗೌತಮ್ ಅವರು ಯುವಕನ ಶೀಘ್ರ ಬಿಡುಗಡೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !