ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಜರುಗುತ್ತಿರುವ ಪ್ರತಿಷ್ಠಿತ ಮೇಜರ್ ಲೀಗ್ ಟಿ20 (MLC) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟರ್ ನಿಕೋಲಸ್ ಪೂರನ್ ವಿಸ್ಫೋಟಕ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ವಾಷಿಂಗ್ಟನ್ ಫ್ರೀಡಂ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ ಶತಕ ಪೂರೈಸಿದ ಪೂರನ್, ಎಂಎಲ್‌ಸಿ ಇತಿಹಾಸದಲ್ಲೇ ಅತ್ಯಂತ ವೇಗದ ಸೆಂಚುರಿ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಧೂಳೀಪಟವಾದ ಫಿನ್ ಅಲೆನ್ ಹಳೇ ದಾಖಲೆ
ಟಾಸ್ ಗೆದ್ದ ವಾಷಿಂಗ್ಟನ್ ಫ್ರೀಡಂ ತಂಡದ ನಾಯಕ ಸ್ಟೀವ್ ಸ್ಮಿತ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಪೂರನ್ ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಹರಿಸಿದ ಅವರು ಕೇವಲ 33 ಎಸೆತಗಳಲ್ಲಿ 13 ಭರ್ಜರಿ ಸಿಕ್ಸ್ ಹಾಗೂ 5 ಬೌಂಡರಿಗಳ ನೆರವಿನಿಂದ 106 ರನ್ ಚಚ್ಚಿದರು. ಈ ಮೂಲಕ 2025 ರಲ್ಲಿ ಫಿನ್ ಅಲೆನ್ (34 ಎಸೆತಗಳಲ್ಲಿ ಶತಕ) ನಿರ್ಮಿಸಿದ್ದ ಅತಿ ವೇಗದ ಶತಕದ ದಾಖಲೆಯನ್ನು ಪೂರನ್ ಬ್ರೇಕ್ ಮಾಡಿದರು.
ಎಂಐ ನ್ಯೂಯಾರ್ಕ್ ಬೃಹತ್ ಸ್ಕೋರ್
ಪೂರನ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ಬಲದಿಂದ ಎಂಐ ನ್ಯೂಯಾರ್ಕ್ ತಂಡವು ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 266 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಪ್ರಮುಖ ಪಂದ್ಯದಲ್ಲೇ ಬಂದ ಈ ದಾಖಲೆಯ ಶತಕ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.



