ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಪ್ರದೇಶದಲ್ಲಿ ನಡೆಯುತ್ತಿದ್ದ ಖೋಟಾ ನೋಟು ಮುದ್ರಣ ಕೇಂದ್ರವೊಂದಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಠಾಣೆ ಪೊಲೀಸರು, ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪುತ್ತೂರು ಕಸಬ ಗ್ರಾಮದ ಇಬ್ರಾಹಿಂ (60), ಕಾಸರಗೋಡು ಜಿಲ್ಲೆ ಚಂಗುಲ ಗ್ರಾಮದ ಶರೀಪ (51), ಹಳಿಯಾಳ ತಾಲೂಕು ಉತ್ತರ ಕನ್ನನಡ ಜಿಲ್ಲೆಯ ಸಂದೀಪ ಪುಂಡಲಿಕ ಶೋಳಂಬಿ (30), ಆಮೂರು ಗ್ರಾಮ, ಕಾಸರಗೊಡು ಜಿಲ್ಲೆಯ ಮಹಮ್ಮದ್ ನಬಾಸ್ (37), ಒಳಮೊಗ್ರು ಗ್ರಾಮ, ಪುತ್ತೂರಿನ ಸಲ್ಮಾನ್ ಫಾರೀಸ್ (25), ಉರುವಾಲು ಗ್ರಾಮ, ಬೆಳ್ತಂಗಡಿಯ ಸಿರಾಜುದ್ದೀನ್ (34), 7) ಪುತ್ತಿಲ ಗ್ರಾಮ, ಬೆಳ್ತಂಗಡಿಯ ಇರ್ಷಾದ್ (31) ಪೋಲೀಸರ ವಶದಲ್ಲಿರುವ ಆರೋಪಿಗಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಂದ ರೂ. 500 ಮುಖಬೆಲೆಯ ಒಂದು ನಕಲಿ ಕರೆನ್ಸಿ ನೋಟು, ರೂ. 500 ನೋಟುಗಳ ಮಾದರಿಯಲ್ಲಿ ಮುದ್ರಿತ 21 A4 ಗಾತ್ರದ ಹಾಳೆಗಳು, ಕಂಪ್ಯೂಟರ್, ಝೆರಾಕ್ಸ್ ಯಂತ್ರ, ವಿವಿಧ ಸೀಲ್‌ಗಳು, ನಕಲಿ ನೋಟು ತಯಾರಿಕೆಗೆ ಬಳಸಲಾಗುತ್ತಿದ್ದ ಇತರೆ ಉಪಕರಣಗಳು ಸೇರಿದಂತೆ ಇತರ ಹಲವು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರಿಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಗುರುವಾರ ಬೆಳಗ್ಗೆ ಅಡೆಂಜದಲ್ಲಿರುವ ಕಟ್ಟಡದ ಮೇಲೆ ದಾಳಿ ನಡೆಸಲಾಯಿತು. ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿಂದು ಮಣಿ ಆರ್ ಎನ್, ಐ.ಪಿ.ಎಸ್ ರವರು ಹಾಗೂ ಕೊಡಗು ಜಿಲ್ಲಾ ಸಿಬ್ಬಂದಿಗಳಾದ ಯೊಗೀಶ್ ಬಿ, ಮತ್ತು ನಿರಂಜನ್ ಎಂ ಎನ್ ರವರುಗಳು, ದ.ಕ ಜಿಲ್ಲಾ ವಿಶೇ಼ಷ ಘಟಕದ ಪೊಲೀಸ್ ನಿರೀಕ್ಷಕರಾದ ನಂದಕುಮಾರ್ ರವರು ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ದೀಪಕ್, ಹೆಚ್.ಸಿ ಸತೀಶ್ ಹಾಗೂ ಹೆಚ್.ಸಿ ರೌಫ್ ರವರುಗಳು ಸದ್ರಿ ಜಾಲವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವಲ್ಲಿ ಉಪ್ಪಿನಂಗಡಿ ಪಿ.ಎಸ್.ಐ ರವರೊಂದಿಗೆ ಸಹಕರಿಸಿದ್ದರು.
ಇದನ್ನೂ ಓದಿ:
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 178 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಪೊಲೀಸರು ಈಗ ಈ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ, ನಕಲಿ ನೋಟುಗಳನ್ನು ಎಲ್ಲೆಲ್ಲಿ ಚಲಾವಣೆಗೆ ತರಲಾಗುತ್ತಿತ್ತು ಮತ್ತು ಇದರ ಹಿಂದೆ ದೊಡ್ಡ ಜಾಲವಿದೆಯೇ ಎಂಬ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.



