July 17, 2026
Friday, July 17, 2026
spot_img

2nd ODI: ಭಾರತದ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ: ಸರಣಿ ಸಮಬಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರವಾಸಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 44 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಶುಭಮನ್ ಗಿಲ್ (31) ಹಾಗೂ ರೋಹಿತ್ ಶರ್ಮಾ (26) ಮೊದಲ ವಿಕೆಟ್‌ಗೆ 44 ರನ್ ಸೇರಿಸಿದರು. ನಂತರ ವಿರಾಟ್ ಕೊಹ್ಲಿ (65) ಮತ್ತು ಶ್ರೇಯಸ್ ಅಯ್ಯರ್ (66) 4ನೇ ವಿಕೆಟ್‌ಗೆ 67 ರನ್‌ಗಳ ಪ್ರಮುಖ ಜೊತೆಯಾಟವಾಡಿದರೂ, ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದಿಂದಾಗಿ ಭಾರತ ದೊಡ್ಡ ಸ್ಕೋರ್ ಗಳಿಸಲು ವಿಫಲವಾಯಿತು.

ವಾಷಿಂಗ್ಟನ್ ಸುಂದರ್ (2), ಅಕ್ಷರ್ ಪಟೇಲ್ (1), ಶಿವಂ ದುಬೆ (0) ಮತ್ತು ಪ್ರಸಿದ್ಧ್ ಕೃಷ್ಣ (0) ನಿರಾಸೆ ಮೂಡಿಸಿದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಅಜೇಯ 20 ರನ್ ಗಳಿಸಿ ತಂಡದ ಮೊತ್ತವನ್ನು 233ಕ್ಕೆ ತಲುಪಿಸಿದರು.

ಜೋ ರೂಟ್ ಅಜೇಯ 99; ಇಂಗ್ಲೆಂಡ್‌ಗೆ ಗೆಲುವು

234 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ಬೆನ್ ಡಕೆಟ್ (0) ಹಾಗೂ ಬೆಥೆಲ್ (4) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಅನುಭವಿ ಬ್ಯಾಟರ್ ಜೋ ರೂಟ್ ಅತ್ಯುತ್ತಮ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಇವರಿಗೆ ವಿಲ್ ಜ್ಯಾಕ್ಸ್ (30) ಹಾಗೂ ಸ್ಯಾಮ್ ಕರನ್ (26) ಉತ್ತಮ ಸಾಥ್ ನೀಡಿದರು.

ಅಂತಿಮವಾಗಿ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 44.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. 133 ಎಸೆತಗಳಲ್ಲಿ 99 ರನ್ ಗಳಿಸಿ ಅಜೇಯರಾಗುಳಿದ ಜೋ ರೂಟ್ ಕೇವಲ 1 ರನ್‌ನಿಂದ ಶತಕ ವಂಚಿತರಾದರು. ಭಾರತದ ಪರ ಗುರ್ನೂರ್ ಬ್ರಾರ್ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿ 1-1 ರಿಂದ ಸಮಬಲಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !